ಸಂಗತ: ಪ್ಯಾನ್ ಇಂಡಿಯಾ ಚಿತ್ರ– ಹಾಗೆಂದರೆ?
‘ಕನ್ನಡ ಚಲನಚಿತ್ರ ನಿರ್ಮಾಪಕರು, ನಿರ್ದೇಶಕರು ತಮ್ಮ ದೃಷ್ಟಿಯನ್ನು ವಿಶಾಲಗೊಳಿಸಿಕೊಂಡು ಪ್ಯಾನ್ ಇಂಡಿಯಾ ಪ್ರೇಕ್ಷಕರತ್ತ ಗಮನಹರಿಸುವ ಕಾಲ ಬಂದಿದೆ’ ಎಂದು ಈಚೆಗೆ ಕೆಲವು ಚಿತ್ರೋದ್ಯಮಿಗಳು ಹೇಳತೊಡಗಿದ್ದಾರೆ. ‘ಕೆ.ಜಿ.ಎಫ್. ಸರಣಿ ಸಿನಿಮಾಗಳಿಂದ ಯಶ್ ಪ್ಯಾನ್ ಇಂಡಿಯಾ ಮಾದರಿ ತೇಲಿಬಿಟ್ಟ ನಂತರ... ದೊಡ್ಡ ಬಜೆಟ್ ಚಿತ್ರಗಳದೇ ಪ್ರತ್ಯೇಕ ಪ್ರಭೇದ ಆಗಿಬಿಟ್ಟಿದೆ’ ಎನ್ನುತ್ತಾರೆ ಎನ್.ವಿಶಾಖ (ಪ್ರ.ವಾ., ನ. 21). ಈ ಪ್ಯಾನ್ ಅಂದರೇನು ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕಾಗಿದೆ.
ಗ್ರೀಕ್‌ನಲ್ಲಿ pas (ಪಾಸ್) ಅಂದರೆ ಎಲ್ಲ. ಅದರಿಂದ ಬಂದಿರಬಹುದಾದ pan (ಪ್ಯಾನ್) ಪದದ ಈಗಿನ ಅರ್ಥ ಎಲ್ಲರನ್ನೂ ಒಳಗೊಳ್ಳುವುದು. ಇದನ್ನು ಪ್ರಿಫಿಕ್ಸ್ ಆಗಿ ಬಳಸಿ ಪ್ಯಾನ್ ಅಮೆರಿಕನ್ ಎಂಬಂತಹ ಪದಪುಂಜಗಳು ಬಂದಿವೆ.
ಅದು ಒಂದು ಕ್ರಿಯಾಪದವೂ ಹೌದು- ನಿಧಾನವಾಗಿ ಚಲಿಸು- ಅಕ್ಕಪಕ್ಕಕ್ಕೆ ಅಥವಾ ಮೇಲೆ ಕೆಳಗೆ. ನಾಮಪದವಾಗಿ ನಮಗೆ ಗೊತ್ತು- ತವಾ, ಕಾವಲಿ, ಬಾಣಲೆ. ಪ್ಯಾನ್ ಇಂಡಿಯಾ ಅಂದರೆ ಇಡೀ ಭಾರತ ಎಂದಿಟ್ಟುಕೊಳ್ಳೋಣ. ಒಂದು ಚಲನಚಿತ್ರ ಹಾಗೆ ಅನ್ನಿಸುವುದು ಅಥವಾ ಆಗುವುದು ಯಾವಾಗ? ಕಲ್ಪನೆ, ವಸ್ತುಹಂತದಲ್ಲಿಯೇ? ಇಡುವ ಬಜೆಟ್‌ನಿಂದಲೇ? ಅನುಸರಿಸುವ ಪ್ರಚಾರ ಹಾಗೂ ಮಾರ್ಕೆಟಿಂಗ್ ತಂತ್ರಗಳಿಂದಲೇ ಅಥವಾ ಕರ್ನಾಟಕದ ಆಚೆಯೂ ಪ್ರದರ್ಶನಗೊಂಡು ಜನಮನ್ನಣೆ, ಬಾಕ್ಸ್ ಆಫೀಸ್ ಗಳಿಕೆ ಪಡೆದಾಗಲೇ?
ಬಾಣಲೆ ಎಂಬ ಪದ ಬಳಸಿದಾಗ ಬಾಣಲೆಯಿಂದ ಬೆಂಕಿಗೆ ಎಂಬ ಪ್ರಯೋಗ ನೆನಪಿಗೆ ಬರುತ್ತದೆ. ಹೋಳಿಗೆಯನ್ನು ಇಂಗ್ಲಿಷ್‌ನಲ್ಲಿ ಪ್ಯಾನ್ ಕೇಕ್ ಎಂದುಬಿಡುವುದುಂಟು. ಈಚೆಗೆ ನಡೆದ ‘ಬರಹದಿಂದ ತೆರೆಗೆ’ ಎಂಬ ಸಂವಾದದಲ್ಲಿ, ಕಾದಂಬರಿಯೊಂದು ಸಿನಿಮಾ ಆದಾಗ ಬೇರೆಯದೇ ರೂಪ ತಳೆಯುವ ಸಾಧ್ಯತೆಯ ಬಗೆಗೆ ಆದ ಚರ್ಚೆ ಕೇಳಿ, ಒಂದು ಕನ್ನಡ ನಾಟಕ ಅದೇ ಭಾಷೆಯಲ್ಲಿ ಚಲನಚಿತ್ರವಾಗಿ, ಬೇರೆ ಭಾಷೆಯ ಚಿತ್ರವೊಂದಕ್ಕೂ ಸ್ಫೂರ್ತಿ ನೀಡಿದ ಉದಾಹರಣೆಯೊಂದು ನೆನಪಾಯಿತು.
‘ನಾಗಮಂಡಲ’ ನಾಟಕವನ್ನು ಗಿರೀಶ ಕಾರ್ನಾಡರು ಬರೆದದ್ದು ಷಿಕಾಗೊ ವಿಶ್ವವಿದ್ಯಾಲಯದಲ್ಲಿದ್ದಾಗ. ಅದರ ಇಂಗ್ಲಿಷ್ ರೂಪ ಅಲ್ಲೇ ಪ್ರದರ್ಶನವಾಯಿತು. ಮೂಲ ಕನ್ನಡ ನಾಟಕ ಹತ್ತು ತಿಂಗಳ ನಂತರ ಬೆಂಗಳೂರಿನಲ್ಲಿ ಪ್ರದರ್ಶಿತವಾಯಿತು. ಪುಸ್ತಕವು 1989ರಲ್ಲಿ ಹೊರಬಂದರೆ, ಸಿನಿಮಾ ಬಿಡುಗಡೆಯಾಗಿದ್ದು 1997ರಲ್ಲಿ. ಸ್ವಾರಸ್ಯಕರ ವಿಷಯವೆಂದರೆ, ಹಿಂದಿಯಲ್ಲಿ ‘ಪಹೇಲಿ’ ಎಂಬ ಚಿತ್ರ 2005ರಲ್ಲಿ ಬಂತು. ಅದು 1973ರಲ್ಲಿ ಮಣಿ ಕೌಲ್ ನಿರ್ದೇಶಿಸಿದ್ದ ‘ದುವಿಧಾ’ ಚಿತ್ರದ ರೀಮೇಕ್ ಆಗಿತ್ತು. ‘ ನಾಗಮಂಡಲ’ ಹಾಗೂ ‘ಪಹೇಲಿ’ಯಲ್ಲಿ ಕೆಲವು ಹೋಲಿಕೆಗಳನ್ನು ಕಾಣಬಹುದು. ಕಾರ್ನಾಡರಿಗೆ ಆ ಕಥೆ ಹೇಳಿದವರು ಎ.ಕೆ.ರಾಮಾನುಜನ್, ಪಹೇಲಿಯು ರಾಜಸ್ಥಾನದ ಜನಪದ ಕತೆಯೊಂದನ್ನು ಆಧರಿಸಿದ್ದು.
ನಾಗಮಂಡಲ ಯಶಸ್ಸು ಪಡೆಯಿತು, ಪಹೇಲಿ ಅಷ್ಟು ಜನಮನ್ನಣೆ ಗಳಿಸಲಿಲ್ಲ. ಯಾರಾದರೂ ಮೊದಲಲ್ಲೇ ‘ನಾನು ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತೇನೆ’ ಎಂದು ಹೇಳಿಕೊಂಡರೆ ನಾವು ಅದನ್ನು ಪ್ಯಾನ್ (= ತೀವ್ರವಾಗಿ ಟೀಕಿಸು) ಮಾಡಬಹುದು. ಏಕೆಂದರೆ ಅಂತಿಮವಾಗಿ ಅದನ್ನು ನಿರ್ಧರಿಸುವವರು ಪ್ರೇಕ್ಷಕರು.
ನಾಗಮಂಡಲ ನಾಟಕ ಭಾರತದ ಹೊರಗೆ ಜನ್ಮತಾಳಿ, ಇಲ್ಲಿ ಪ್ರದರ್ಶಿತವಾಗಿ ನಂತರ ಸಿನಿಮಾ ರೂಪದಲ್ಲಿ ಇಲ್ಲಿ ಮತ್ತು ಹೊರಗೆ ಹೆಸರಾಯಿತು. ಮೂಲ ಕತೆಯ ದೃಷ್ಟಿಯಿಂದ ಅದು ಲೋಕಲ್ ಅಥವಾ ಪ್ರಾದೇಶಿಕ ಇರಬಹುದು. ಆದರೆ ವಿವಿಧ ಭಾಷೆಗಳ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಅದು ಯಶಸ್ವಿಯಾಯಿತು.
ನಿರ್ದೇಶಕ, ನಟರ ಕಾರಣದಿಂದ ಸಿನಿಮಾವು ‘ಪ್ಯಾನ್...’ ಸ್ವರೂಪ, ವ್ಯಾಪ್ತಿ ಪಡೆಯುತ್ತದೆ ಎನ್ನುವಂತಿಲ್ಲ. ನಾಗಾಭರಣ, ಪ್ರಕಾಶ್ ರಾಜ್, ಅಮೋಲ್ ಪಾಲೇಕರ್, ಶಾರುಖ್ ಖಾನ್- ಇವರಲ್ಲಿ ಯಾರು ಹೆಚ್ಚು ಪ್ಯಾನ್ ಇಂಡಿಯಾ ವ್ಯಕ್ತಿ ಎಂದು ಹೋಲಿಸುವುದು ಅಸಂಗತ.
ನಾನು ನಾಗಮಂಡಲ ನಾಟಕವನ್ನು ಓದಿದ್ದು ಹಾಗೂ ರಂಗಪ್ರದರ್ಶನ ನೋಡಿದ್ದು ಕೃತಿ ಹೊರಬಂದ ಹತ್ತು ವರ್ಷಗಳ ನಂತರ. ಸಿನಿಮಾ ನೋಡಿದ್ದೂ ತಡವಾಗಿಯೇ. ಈ ವರ್ಷ ಮತ್ತೆ ಓದಿದೆ, ಸಿನಿಮಾದ ಹಾಡುಗಳನ್ನು ಮತ್ತೆ ಕೇಳಿದೆ. ಇವೆಲ್ಲ ಭಿನ್ನ ಭಿನ್ನ ಅನುಭವ ನೀಡಿವೆ. ಪ್ರಸ್ತಾವನೆಯಲ್ಲಿನ ಒಂಬತ್ತು ಪುಟಗಳನ್ನು ಓದಿದಾಗ, ಪ್ರದರ್ಶನದಲ್ಲಿ ಇದನ್ನೆಲ್ಲ ಹೇಗೆ ಅಳವಡಿಸುತ್ತಾರೆ ಎಂಬ ಸವಾಲು ಕಾಡಿತ್ತು. ದೀಪದ ಜ್ಯೋತಿಗಳೂ ಪಾತ್ರಗಳೇ. ಕತೆಯು ಸುಂದರ ಯುವತಿಯ ರೂಪ ತಾಳುತ್ತದೆ.
ಮನುಷ್ಯ ಪಾತ್ರಧಾರಿ (ನಾಟಕ ಆಡಿಸಿದವ) ‘ಯಾರೊಬ್ಬರ ಸ್ವತ್ತಾಗಿ ಉಳೀಲಿಕ್ಕಲ್ಲ ಕತೆ ಹುಟ್ಟೋದು’ ಅನ್ನುತ್ತಾನೆ’. ‘ಹಗಲು ಹೊತ್ತಿನ ಮುಖ ಬೇರೆ, ರಾತ್ರಿಯ ಸ್ಪರ್ಶ ಬೇರೆ’ ಎಂಬುದು ರಾಣಿಯನ್ನು ಕಾಡುವ ದ್ವಂದ್ವ. ಸಿನಿಮಾದ ಮೊದಲ ಕೆಲವು ನಿಮಿಷ ‘ ಇದು ನಾಟಕವೋ ಸಿನಿಮಾನೋ’ ಎಂಬ ದ್ವಂದ್ವ ನನ್ನದಾಗಿತ್ತು!
ಒಟ್ಟಿನಲ್ಲಿ ಕೃತಿಯೊಂದರ ಮೂಲ ರೂಪದಿಂದ ಬೇರೆಯದೇ ಮಾಧ್ಯಮಕ್ಕೆ ತಂದಾಗ ಕೆಲವೊಮ್ಮೆ ಬದಲಾವಣೆಗಳು ಹೆಚ್ಚಾಗಿ ಪ್ರಭಾವ ಅಳ್ಳಕವಾಗಬಹುದು ಅಥವಾ ಸಿನಿಮಾ ಮೂಲಕತೆಗಿಂತ ಮುಂದೆ ಹೋಗಿ ಪ್ರೇಕ್ಷಕರನ್ನು ಹೆಚ್ಚು ತಟ್ಟಲೂಬಹುದು.
ಪ್ಯಾನ್ ಎಂಬುದು ಚಲನಚಿತ್ರದಲ್ಲಿ ಸಾರ್ವತ್ರಿಕ ಮೌಲ್ಯ ಇದೆಯೇ ಎಂಬುದನ್ನು ಅವಲಂಬಿಸಿರುತ್ತದೆ. ಪ್ರಾರಂಭದಲ್ಲೇ ‘ಪ್ಯಾನ್’ ರಾಗ ಹಾಡಿದರೆ ಮನೆಯನ್ನೇ (ರಾಜ್ಯದ ಫಿಲ್ಮ್ ಮಾರುಕಟ್ಟೆ) ಗೆಲ್ಲಲಾಗದಿರಬಹುದು, ಮಾರು (ಹೊರಗಿನ ಪ್ರೇಕ್ಷಕರು) ದೂರವೇ ಉಳಿಯಿತು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.