ADVERTISEMENT

ಸರ್ವಾಧಿಕಾರಿ ಶಕೆ: ಯಾರಿಂದ ಆರಂಭ?

ನೆಹರೂ–ಗಾಂಧಿ ಪರಿವಾರದ ಅಸಮರ್ಥತೆ ಮರೆಮಾಚುವುದರಿಂದ ಪಕ್ಷಕ್ಕೆ ಪ್ರಯೋಜನವಾಗದು

ಪ್ರಜಾವಾಣಿ ವಿಶೇಷ
Published 30 ಆಗಸ್ಟ್ 2020, 20:30 IST
Last Updated 30 ಆಗಸ್ಟ್ 2020, 20:30 IST
   

ಕಾಂಗ್ರೆಸ್‌ ಮುಖಂಡ ದಿನೇಶ್ ಗುಂಡೂರಾವ್ ತಮ್ಮ ಲೇಖನದಲ್ಲಿ (ಸಂಗತ, ಆ. 28) ಕಾಂಗ್ರೆಸ್ ವರಿಷ್ಠರ ವಂಶಪಾರಂಪರ್ಯದತ್ತವಾದ ಅಧಿಕಾರ ಲಾಲಸೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ಭರದಲ್ಲಿ ಅವರು ಬಿಜೆಪಿಯ ಮೇಲೆ ವಿನಾಕಾರಣ ಗೂಬೆ ಕೂರಿಸಲು ಪ್ರಯತ್ನಿಸಿರುವುದು ವಿಪರ್ಯಾಸ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸರ್ವಾಧಿಕಾರಿ ನೀತಿಯನ್ನು ಎದುರಿಸಲು ಕಾಂಗ್ರೆಸ್‌ಗೆ ಗಾಂಧಿ ಪರಿವಾರದ ನಾಯಕತ್ವವೇ ಅನಿವಾರ್ಯ ಎಂದು ಅವರು ಹೇಳಿರುವುದು ಹಾಸ್ಯಾಸ್ಪದ.

ಸ್ವಾತಂತ್ರ್ಯ ಬಂದ ನಂತರ ದೇಶದಲ್ಲಿ ಸರ್ವಾಧಿಕಾರದ ಯುಗವನ್ನು ಪ್ರಾರಂಭಿಸಿದ್ದು ಕಾಂಗ್ರೆಸ್‌ನ ಅಧಿನಾಯಕಿಯಾಗಿದ್ದ ಇಂದಿರಾ ಗಾಂಧಿಯವರೇ ವಿನಾ, ಕಾಂಗ್ರೆಸ್ಸೇತರ ಪಕ್ಷಗಳಿಂದ ಪ್ರಧಾನಿಗಳಾದ ಮೊರಾರ್ಜಿ ದೇಸಾಯಿ ಅಥವಾ ವಾಜಪೇಯಿ ಅವರಲ್ಲ.

ಪುಲ್ವಾಮಾ ಘಟನೆಯಲ್ಲಿ ಬಿಜೆಪಿ ನಡೆಸಿದ ಭಾವನಾತ್ಮಕ ಪ್ರಚಾರವೇ 2019ರಲ್ಲಿ ಕಾಂಗ್ರೆಸ್ ಸೋಲಲು ಕಾರಣ ಎಂದು ಅವರು ಕುಂಟು
ನೆಪವೊಡ್ಡಿ ಗಾಂಧಿ ಪರಿವಾರದ ಅಸಮರ್ಥತೆಯನ್ನು ಮರೆಮಾಚಲು ಪ್ರಯತ್ನಿಸಿದ್ದಾರೆ. ಹಾಗಿದ್ದರೆ, 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದಕ್ಕೆ ಅವರು ಯಾವ ಕಾರಣ ನೀಡುವರು?

ADVERTISEMENT

ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ

ಕಾಲದ ವ್ಯಂಗ್ಯ!

ದಿನೇಶ್ ಅವರು ಮನಮೋಹನ್ ಸಿಂಗ್ ಬಗ್ಗೆ ಉಲ್ಲೇಖಿಸಿದ್ದಾರೆ. ‘ಇತಿಹಾಸವು ನನ್ನ ಜೊತೆ ಈಗಿನ ಮಾಧ್ಯಮಗಳಿಗಿಂತಲೂ ಹೆಚ್ಚು ಸೌಮ್ಯವಾಗಿ ನಡೆದುಕೊಳ್ಳುತ್ತದೆ’ ಎಂದು ತಮ್ಮ ಅಧಿಕಾರಾವಧಿಯ ಕೊನೆಯ ದಿನಗಳಲ್ಲಿ ಡಾ. ಸಿಂಗ್ ಹೇಳಿದ್ದು ಈ ಬರಹ ಓದಿದಾಗ ನೆನಪಾಯಿತು. 2008–09ರ ಸುಮಾರಿಗೆ ಬಂದಪ್ಪಳಿಸಿದ ಆರ್ಥಿಕ ಹಿಂಜರಿತವನ್ನು ಸಮರ್ಥವಾಗಿ ಎದುರಿಸಿ ನಿಂತ ಈ ಮಹಾನುಭಾವ ಈ ಹೊತ್ತಿನಲ್ಲಿ ಅಧಿಕಾರದಲ್ಲಿ ಇದ್ದಿದ್ದರೆ? ಈಗ ಹಲವರು ಆರ್ಥಿಕ ವಿಚಾರಗಳ ಬಗ್ಗೆ ಡಾ. ಸಿಂಗ್ ಏನು ಹೇಳುತ್ತಾರೆ ಎಂಬುದನ್ನು ಕೇಳಲು ಕಾತರದಿಂದ ಕಾಯುತ್ತಿರುವುದು ನನ್ನ ಅನುಭವಕ್ಕೆ ಬಂದಿದೆ.

ಇದೇ ವ್ಯಕ್ತಿಯನ್ನು ನಮ್ಮಲ್ಲಿ ಒಂದಿಷ್ಟು ಜನ ಮೌನಿಬಾಬಾ, ಮಾತೇ ಆಡದ ಪ್ರಧಾನಿ, ಕೈಗೊಂಬೆ ಎಂದೆಲ್ಲ ಹಂಗಿಸಿದ್ದು ಇದೆ. ಆದರೆ, ‘ಕೈಗೊಂಬೆ’ಯಿಂದ ಆರ್ಥಿಕ ಕುಸಿತಕ್ಕೆ ಎದೆಯೊಡ್ಡಲು ಸಾಧ್ಯವೇ? ಅದಕ್ಕೂ ಗಟ್ಟಿತನ ಬೇಕಲ್ಲವೇ? ಮಾತಿನಲ್ಲೇ ಮಂಟಪ ಕಟ್ಟುವವರ ನಡುವೆ, ಮೌನವಾಗಿ ಕೆಲಸ ಮಾಡುವವರು ಕೆಟ್ಟವರಂತೆ ಕಾಣುವುದು ಕಾಲದ ವ್ಯಂಗ್ಯವಿರಬೇಕು.

ಬಿ.ಎಂ. ಭಟ್ಟ, ಕುಂದಾಪುರ

ಆಶಯ ಅರಿಯಲಿ

ಕಾಂಗ್ರೆಸ್ ಪಕ್ಷದ ನಾಯಕತ್ವಕ್ಕೆ ಸಂಬಂಧಿಸಿದಂತೆ ಪತ್ರ ಬರೆದ ಮುಖಂಡರಲ್ಲಿ ಒಬ್ಬರಾದ ಸಂಸದ ಶಶಿ ತರೂರ್ ಅವರ ನಡೆಯನ್ನು ಟೀಕಿಸಿದ ಆ ಪಕ್ಷದ ಹಲವು ನಾಯಕರ ಧೋರಣೆ ಸರಿಯಲ್ಲ. ಪಕ್ಷದಲ್ಲಿದ್ದ ಮಾತ್ರಕ್ಕೆ ಎಲ್ಲವನ್ನೂ ಒಪ್ಪಬೇಕೆಂಬ ನಿಯಮವಿಲ್ಲ. ನಾಯಕತ್ವದ ವಿಚಾರವನ್ನು ಸಿದ್ಧಾಂತಕ್ಕೆ ತಳಕು ಹಾಕಿ ಮಾತನಾಡುವುದು ಸರಿಯಲ್ಲ. ನಾಯಕನಾದವನು ಎದುರಾಳಿಗೆ ಸರಿಸಮನಾಗಿ ನಿಲ್ಲುವಂತಿರಬೇಕು. ಹಾಗಿದ್ದರೆ, ಹಿಂಬಾಲಕರಲ್ಲೂ ಆತ್ಮಸ್ಥೈರ್ಯ ಮೂಡುತ್ತದೆ.

ತರೂರ್ ಅವರಂತಹ ಮುತ್ಸದ್ದಿ, ಹಲವು ದೃಷ್ಟಿಕೋನಗಳಿಂದ ವಿಷಯ ಗ್ರಹಿಸಿ ನಿರ್ಧಾರ ಕೈಗೊಂಡಿರುತ್ತಾರೆ. ವೈಯಕ್ತಿಕ ನಿಂದನೆ ಬಿಟ್ಟು, ಪಕ್ಷದ ಒಳಿತಿಗಾಗಿ ಸಲಹೆಯನ್ನು ಒಪ್ಪುವುದು ಸೂಕ್ತ. ಇತಿಹಾಸವನ್ನು ನೋಡಿದರೆ, ಉತ್ತಮ ರಾಜನೀತಿಶಾಸ್ತ್ರಜ್ಞನಾಗಿದ್ದ ಕೌಟಿಲ್ಯನ ಬೆಲೆ ಅರಿಯದೆ ಅವಮಾನಿಸಿ ಹೊರಗಟ್ಟಿದ ಧನನಂದನನು ಕಾಲಾನಂತರ ಬೆಲೆ ತೆತ್ತಿದ್ದು ತಿಳಿಯುತ್ತದೆ. ಸಲಹೆಗಳ ಹಿಂದೆ ಒಂದು ಉತ್ತಮ ಆಶಯ ಇರುವುದನ್ನು ತಿಳಿಯಬೇಕಾಗಿದೆ.

ಶ್ವೇತಾ ಎನ್. ಸೊರಬ, ಶಿವಮೊಗ್ಗ

ವ್ಯಕ್ತಿನಿಷ್ಠೆ ತರವಲ್ಲ

ದಿನೇಶ್ ಅವರು ಬಹುತೇಕ ಕಾಂಗ್ರೆಸ್ಸಿಗರಂತೆ ಅತಿಯಾದ ವ್ಯಕ್ತಿನಿಷ್ಠೆ ಪ್ರಕಟಿಸಿದ್ದಾರೆ. ದೇಶದ ಅತಿ ಹಳೆಯ ರಾಜಕೀಯ ಪಕ್ಷದ ದೊಡ್ಡ ಸಮಸ್ಯೆ ಇದೇ. ದಿನೇಶ್ ಬೆಂಬಲಿಸುತ್ತಿರುವ ರಾಹುಲ್ ಗಾಂಧಿ ಅವರು ಪಕ್ಷದ ನಾಯಕತ್ವ ವಹಿಸಿಕೊಳ್ಳಲು ಸಿದ್ಧರಿಲ್ಲ. ಇಂತಹ ಮನಃಸ್ಥಿತಿಯ ನಾಯಕನನ್ನು ದೇಶ ಹೇಗೆ ಒಪ್ಪಲಿದೆ? ಯಾವುದೇ ರಾಜಕೀಯ ಪಕ್ಷದ ನಾಯಕತ್ವವನ್ನು ಪಕ್ಷದ ಕಾರ್ಯಕರ್ತರು ಒಪ್ಪಿದರೆ ಸಾಲದು, ದೇಶದ ಜನ ಒಪ್ಪಬೇಕು. ಅವರು ಹೇಳುವುದನ್ನು ದೇಶದ ಉದ್ದಗಲಕ್ಕೂ ಜನ ಕೇಳಬೇಕು, ವಿಮರ್ಶಿಸಬೇಕು.

ಸದ್ಯಕ್ಕೆ ಕಾಂಗ್ರೆಸ್‌ನಲ್ಲಿ ನೆಹರೂ– ಗಾಂಧಿ ಕುಟುಂಬ ಹೊರತುಪಡಿಸಿ ಈ ರೀತಿಯ ನಾಯಕರು ಯಾರೂ ಇಲ್ಲವೆಂದಲ್ಲ. ಪ್ರತಿಭಾವಂತರೂ ಉತ್ತಮರೂ ವಾಗ್ಮಿಗಳೂ ಅನೇಕರಿದ್ದಾರೆ. ಆದರೆ ಅಂಥವರ ಪ್ರಭಾವ, ವರ್ಚಸ್ಸು ಕೇವಲ ಒಂದು ಪ್ರದೇಶಕ್ಕೆ ಸೀಮಿತವಾಗಿದೆ. ಹೀಗಾಗಿ ಕಾಂಗ್ರೆಸ್ ಸಂಘಟನಾತ್ಮಕವಾಗಿ ಬಲಹೀನವಾಗುತ್ತಾ ಸಾಗಿದೆ.

ಪಕ್ಷವನ್ನು ಪುನರ್ ಸಂಘಟಿಸಬೇಕು ಎಂಬ ತುಡಿತವಿರುವ ಮುಖಂಡರು, ಇಡೀ ರಾಷ್ಟ್ರ ಒಪ್ಪುವಂತಹ ನಾಯಕರನ್ನು ಗುರುತಿಸಲಿ. ಆ ನಂತರ ಪ್ರಜಾತಾಂತ್ರಿಕ ಚುನಾವಣೆಯ ಮೂಲಕ ಪಕ್ಷದ ಅಧ್ಯಕ್ಷರ ಆಯ್ಕೆ ನಡೆಯಲಿ. ಹೀಗಾದರೆ ಮಾತ್ರ ಪಕ್ಷವು ಒಂದು ಕುಟುಂಬ ಹಾಗೂ ಹೆಸರಿನ ಅವಲಂಬನೆಯಿಂದ ಹೊರಬಂದು ಹಳೆಯ ವೈಭವ ಗಳಿಸಲು ಸಾಧ್ಯ.

‌ಆರ್.ಎಚ್.ನಟರಾಜ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.