ಮನೆಯಲ್ಲಿ ಮಗುವೊಂದು ಬೆಳೆಯುತ್ತಲೇ ಹೆತ್ತವರ ದಿಗಿಲೂ ಬೆಳೆಯುತ್ತಾ ಹೋಗುತ್ತದೆ. ಮಗುವಿನ ಕುರಿತ ಅವರ ನಿರೀಕ್ಷೆಗಳಂತೂ ಮುಗಿಲಿಗೂ ಮಿಗಿಲು. ಮಕ್ಕಳ ಬೆಳವಣಿಗೆ, ಭವಿಷ್ಯತ್ತಿನ ಕುರಿತಾಗಿ ತರಹೇವಾರಿ ಕನವರಿಕೆ, ಚಿಂತೆ, ಭೀತಿ. ‘ಮಕ್ಕಳು ತಮ್ಮಷ್ಟಕ್ಕೇ ಬೆಳೆಯುತ್ತವೆ’ ಎಂಬ ಹಿರಿಯರ ಕಿವಿಮಾತು ಮರೆತು, ತಮ್ಮಿಚ್ಛೆಯಂತೆ ಅವರನ್ನು ಬೆಳೆಸುವ, ರೂಪಿಸುವ ಸಾಹಸದಲ್ಲಿ ಪೋಷಕರು ತಮ್ಮಲ್ಲೇ ನೀಲಿನಕ್ಷೆಯೊಂದನ್ನು ತಯಾರಿಸಿಡುತ್ತಾರೆ. ಜಗತ್ತಿನ ಎಲ್ಲ ಸುಖ-ಸವಲತ್ತುಗಳೂ ತಮ್ಮ ಮಕ್ಕಳಿಗಿರಬೇಕು ಎಂಬ ಹಪಹಪಿ, ನಿರೀಕ್ಷೆ, ಒತ್ತಡದ ಭಾರವನ್ನು ಅವರ ಮೇಲೆ ಹೇರುತ್ತಾರೆ.
ಮನೋವಿಜ್ಞಾನದ ಪ್ರಕಾರ, ಆನುವಂಶೀಯತೆ, ವೈಯಕ್ತಿಕ ಭಿನ್ನತೆ, ಪರಿಸರ ಮತ್ತು ಸನ್ನಿವೇಶದ ಪ್ರಚೋದನೆಗಳಿಗೆ ಒಡ್ಡುವ ಪ್ರತಿಕ್ರಿಯೆಗಳೇ ನಮ್ಮ ವ್ಯಕ್ತಿತ್ವವನ್ನು ರೂಪಿಸುವ ಕುಲುಮೆಗಳು. ಅನುಭವದ ಮೂಸೆಯಲ್ಲಿ ಅರಳುವ, ಅನುಸರಿಸುವ ಅಭ್ಯಾಸಗಳೆಲ್ಲವೂ ಮಗುವಿನ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ. ತಾವು ನೀಡುವ ಪ್ರೀತಿ, ಕಾಳಜಿ, ಸೌಲಭ್ಯಗಳ ಹೊರತಾಗಿಯೂ ಮಕ್ಕಳ ಬೆಳವಣಿಗೆಯನ್ನು ಪ್ರಭಾವಿಸುವ ಹಲವಾರು ಸೂಕ್ಷ್ಮಸಂಗತಿಗಳ ಅರಿವು ಪೋಷಕರಿಗೆ ಇರಬೇಕಾದುದು ಅಗತ್ಯ. ವಾರ್ಷಿ
ಕೋತ್ಸವ ಸಂದರ್ಭದಲ್ಲಿ ಹಿರಿಯ ಮೇಷ್ಟ್ರು ನೀಡಿದ ನಿದರ್ಶನವೊಂದು ಮಕ್ಕಳ ಪಾಲನೆ-ಪೋಷಣೆಯಲ್ಲಿ ವಹಿಸಬೇಕಾದ ಎಚ್ಚರಿಕೆಯ ಕುರಿತು ಕಣ್ತೆರೆಸುತ್ತದೆ ಮತ್ತು ದಿಕ್ಸೂಚಿಯಾಗಿ ದಾರಿ ತೋರುತ್ತದೆ.
ಮೇಷ್ಟ್ರು ಶಾಲಾ ಹುಡುಗರಿಬ್ಬರಿಗೆ ಎರಡು ಸಂಪಿಗೆ ಗಿಡಗಳನ್ನು ನೀಡಿ, ಶಾಲಾ ಆವರಣದಲ್ಲಿ ಜೋಪಾನವಾಗಿ ಬೆಳೆಸಲು ಸೂಚಿಸುತ್ತಾರೆ. ಒಬ್ಬ ಹುಡುಗ ತನ್ನ ಗಿಡಕ್ಕೆ ದಿನಾಲು ಯಥೇಚ್ಛವಾಗಿ ನೀರು, ಗೊಬ್ಬರವನ್ನು ತಂದುತಂದು ಸುರಿಯುತ್ತಿದ್ದ. ಹುಲುಸಾಗಿ ಹಚ್ಚಹಸಿರಾಗಿ ಕಣ್ಸೆಳೆಯುತ್ತಾ ಬೆಳೆಯುತ್ತಿದ್ದ ಸಸ್ಯದ ಬಗ್ಗೆ ಅವನಿಗೆ ಎಲ್ಲಿಲ್ಲದ ಹೆಮ್ಮೆ. ಮತ್ತೊಬ್ಬ ಹುಡುಗ ಮಾತ್ರ ಆತನ ಗಿಡಕ್ಕೆ ಹಿತಮಿತವಾಗಿ ನೀರು, ಗೊಬ್ಬರವನ್ನು ಪೂರೈಸುತ್ತಿದ್ದರಿಂದ ಅವನದ್ದು ನಿಧಾನಗತಿ ಬೆಳವಣಿಗೆಯ ಸಣಕಲು ಸಸ್ಯವಾಯಿತು. ದಿನಗಳು ಉರುಳಿದವು, ಅದೊಂದು ದಿನ ಗಾಳಿಮಳೆ ಹೆಚ್ಚಾಗಿ, ತುಂಬು ಆರೈಕೆಯಲ್ಲಿ ಬೆಳೆದಿದ್ದ ಹುಡುಗನ ಗಿಡವು ಬೇರುಸಹಿತ ಕಿತ್ತುಬಿತ್ತು! ಆದರೆ ಪಕ್ಕದಲ್ಲಿದ್ದ ಮತ್ತೊಬ್ಬನ ಸಣಕಲು ಸಸ್ಯ ಮಾತ್ರ ಸ್ವಲ್ಪ ಬಾಗಿತಾದರೂ ಮತ್ತೆ ದೃಢವಾಗಿ ನಿಂತುಕೊಂಡಿತು. ಬೇಸರಗೊಂಡ ಮೊದಲನೇ ಹುಡುಗನಿಗೆ ಮೇಷ್ಟ್ರು ಹೇಳಿದ್ದಿಷ್ಟು: ‘ನೀನು ಗಿಡವೊಂದರ ಅಗತ್ಯಕ್ಕಿಂತಲೂ ಹೆಚ್ಚಾಗಿ ನೀರು, ಗೊಬ್ಬರವನ್ನು ಎರೆಯುತ್ತಿದ್ದೆ. ನೆಲದ ಮೇಲೆಯೇ ಎಲ್ಲವೂ ದಕ್ಕಿದ್ದರಿಂದ ಬೇರುಗಳು ಆಳಕ್ಕಿಳಿಯಲಿಲ್ಲ, ಅದರ ಬುಡ ಭದ್ರವಾಗಲಿಲ್ಲ! ಆದರೆ ಅವನು ಹಾಗಲ್ಲ. ಹಿತಮಿತವಾಗಿ ನೀರು, ಗೊಬ್ಬರ ಹಾಕಿದ, ಹೆಚ್ಚಿನ ಸಾರ, ಸತ್ವದ ಹುಡುಕಾಟದಲ್ಲಿ ಬೇರುಗಳು ಆಳಕ್ಕಿಳಿದಿದ್ದರಿಂದ ಆ ಗಿಡ ಗಾಳಿಮಳೆಯಲ್ಲಿಯೂ ಭದ್ರವಾಗಿ ಬೇರೂರಿ ನಿಂತುಕೊಂಡಿದೆ’.
ಮಕ್ಕಳೂ ಹಾಗೆಯೇ. ಪೋಷಕರ ಜವಾಬ್ದಾರಿಯುತ ನಡವಳಿಕೆ, ಹಿತಮಿತ ಸೌಲಭ್ಯ, ಸವಲತ್ತುಗಳ ಪೂರೈಕೆ, ಶಿಸ್ತಿನ ಆರೈಕೆ, ಅಗತ್ಯ ಪ್ರೋತ್ಸಾಹವೇ ಮಕ್ಕಳ ಯಶಸ್ಸಿನ ನೀರು, ಗೊಬ್ಬರ. ಗಿಡದಂತೆಯೇ ಸಹಜವಾಗಿ ಬೇರೂರಿ ಮುಗಿಲಿನೆಡೆಗೆ ಮುಖ ಮಾಡಿ ಸರಸರನೆ ಅರಳಬೇಕೆಂದರೆ ಮಕ್ಕಳಿಗೆ ಸೌಲಭ್ಯಗಳ ಜೊತೆಗಿಷ್ಟು ಕೊರತೆಗಳೂ ಕಾಣಬೇಕು, ಕಾಡಬೇಕು. ಮಣ್ಣಿನ ಸಾಂಗತ್ಯ ಸಿಗದೇ ಬೆವರಿನ ಬೆಲೆ ತಿಳಿಯದೇ ಕುಟುಂಬದ ಜೊತೆ ಬೆರೆಯದೇ ತಮ್ಮಷ್ಟಕ್ಕೆ ಬೆಳೆದ ಮಕ್ಕಳು ಎಂದಿಗೂ ಪರಿಪೂರ್ಣರಾಗಲು ಪ್ರಯತ್ನಿಸಲಾರರು. ಮಾನವೀಯ ಮೌಲ್ಯಗಳು, ಸಂಸ್ಕಾರದ ತಳಹದಿಯ ಮೇಲೆ ವ್ಯಕ್ತಿತ್ವ ವಿಕಸನ, ಪ್ರತಿಭೋನ್ನತಿಯಲ್ಲಿ ಮಕ್ಕಳ ಭವಿಷ್ಯದ ಗೋಪುರ ಕಟ್ಟಲ್ಪಡಬೇಕು. ವಿದ್ಯಾಭ್ಯಾಸಕ್ಕಾಗಿ ಲಕ್ಷಲಕ್ಷ ವೆಚ್ಚ ಮಾಡಿದಷ್ಟಕ್ಕೇ ಮಕ್ಕಳು ಗೆದ್ದು ನಿಲ್ಲಲಾರರು. ಆದರೆ ಶಿಕ್ಷಣದ ವ್ಯಾಪಾರದ ಅಂಗಡಿಗಳಲ್ಲಿ ಅಕ್ಷರವನ್ನು ಕೊಂಡುತಂದರೆ, ಕಂಡರಿಯದ ಸುಖ, ಸಮೃದ್ಧಿ ಸಿದ್ಧಿಸಿಬಿಡುತ್ತದೆ ಎಂಬ ಕನವರಿಕೆಯಲ್ಲಿ ಹೆತ್ತವರಿದ್ದಾರೆ.
ಇಂತಹ ಕಾರಣಗಳಿಂದ, ನಿರ್ಭೀತ ವಾತಾವರಣದಲ್ಲಿ ಲವಲವಿಕೆಯಿಂದ ಬೆಳೆಯಬೇಕಾದ ಎಳೆಯ ಗೆಳೆಯರು ನಿತ್ಯವೂ ಅಪರಿಮಿತ ಒತ್ತಡದಲ್ಲಿ ನಲುಗುವಂತಾಗಿದೆ. ಈಗೆಲ್ಲಾ ತರಗತಿಯ ಪರೀಕ್ಷೆಗಳಲ್ಲಿ ಪಾಸಾದರೂ ಜೀವನೋತ್ಸಾಹ ಕಳೆದುಕೊಂಡು, ಬದುಕು ತಂದೊಡ್ಡುವ ಸವಾಲುಗಳಿಗೆ ಜವಾಬು ನೀಡುವಲ್ಲಿ ಸೋತವರದು ದೊಡ್ಡ ಸಂಖ್ಯೆ. ಮೌಲ್ಯಯುತ, ಕೌಶಲಯುತ ಕಲಿಕೆಯೊಂದೇ ಮಕ್ಕಳನ್ನು ಅವರ ನಾಳೆಗಳಲ್ಲಿ ಸದೃಢಗೊಳಿಸಬಲ್ಲದು, ಸವಾಲಿಗೆ ಎದೆಗೊಟ್ಟು ನಿಲ್ಲಿಸಬಲ್ಲದು ಎಂಬುದು ಪದೇಪದೇ ಸಾಬೀತಾಗುವ ಸತ್ಯ.
ನಿಜ, ನಮ್ಮೊಳಗಿನ ಉತ್ಸಾಹದ ಕಾವು, ಕಾಡುವ ಹಸಿವು, ಅನುಭವಿಸಿದ ನೋವೇ ನಮ್ಮ ನಾಳೆಗಳನ್ನು ನಿರೂಪಿಸುತ್ತವೆ. ಹಾಗಾಗಿ, ಬಹುವಿಧದ ಕೆಲಸಗಳನ್ನು ನಿರ್ವಹಿಸಬಲ್ಲ, ವಿಪುಲ ಸಾಧ್ಯತೆಗಳನ್ನು ಸೃಷ್ಟಿಸಬಲ್ಲ ಆತ್ಮಬಲವನ್ನು ನಂಬಿ ಮಕ್ಕಳನ್ನು ಮುನ್ನಡೆಸಬೇಕಿದೆ. ಆಂತರಿಕ ಒತ್ತಡದಿಂದ ಒಡೆದ ತತ್ತಿಯು ಜೀವೋದ್ಭವಕ್ಕೆ ಕಾರಣವಾದರೆ, ಬಾಹ್ಯ ಒತ್ತಡದಲ್ಲಿ ಒಡೆದ ತತ್ತಿಯು ಜೀವನಾಶಕ್ಕೆ ಕಾರಣವಾಗುತ್ತದೆಂಬ ಎಚ್ಚರ ಅಗತ್ಯ.
ಆಧುನೀಕರಣದ ಭರಾಟೆಯಲ್ಲಿ ಯಾಂತ್ರಿಕಗೊಂಡ ಬದುಕು ಅನಗತ್ಯ ಒತ್ತಡಗಳ ಕುಲುಮೆಯಲ್ಲಿ ಬೇಯುತ್ತಿದೆ. ಸರಳವಾದ ಬಾಳು, ನಿರಾಳ ಭಾವದ ಸಹಜ ಸೌಂದರ್ಯಕ್ಕೆ ತೋರಿಕೆಯ ವೇಷ ತೊಡಿಸುವ ಬದಲು, ಬದುಕಿನ ಭಾವಪರಿಧಿಯನ್ನು ಹಿಗ್ಗಿಸಿಕೊಂಡು, ಒಲವ ಸಿಹಿಯನ್ನುಂಡು ಸುಖಿಸುವ, ಸಂಭ್ರಮಿಸುವ, ಬೆಳೆಯುವ, ಬೆಳಗುವ ನೀತಿ ನಮ್ಮದಾಗಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.