ADVERTISEMENT

‘ಶೂನ್ಯ ಆಯವ್ಯಯ ಚುನಾವಣೆ’ ಸಾಧ್ಯವೇ?

ಹಣ ಚೆಲ್ಲಿ ಚುನಾವಣೆ ಗೆಲ್ಲುವ ಪರಿಪಾಟಕ್ಕೆ ತಡೆಯೊಡ್ಡುವುದು ಇಂದಿನ ಅಗತ್ಯ

ಡಾ.ಜಗನ್ನಾಥ ಕೆ.ಡಾಂಗೆ
Published 25 ಡಿಸೆಂಬರ್ 2018, 19:57 IST
Last Updated 25 ಡಿಸೆಂಬರ್ 2018, 19:57 IST
   

ನಮ್ಮಲ್ಲಿ ಶೈಕ್ಷಣಿಕ ಹಂತದಲ್ಲೇ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಬೆಳೆಸುವ ಪ್ರಯತ್ನವನ್ನು ನಡೆಸಲಾಗುತ್ತದೆ. ಹೀಗೆ ನಾಯಕತ್ವ ಗುಣ ಬೆಳೆಸಿಕೊಂಡ ಯುವಕರಲ್ಲಿ, ‘ನಾನು ರಾಜಕೀಯ ನಾಯಕನಾಗುತ್ತೇನೆ’ ಎನ್ನುವವರ ಸಂಖ್ಯೆ ಅತಿ ವಿರಳ. ನಾಯಕತ್ವದ ಕೌಶಲ ಮತ್ತು ಸಾಮರ್ಥ್ಯ ಹೊಂದಿರುವ ಯುವಕರು ಕೂಡ ರಾಜಕೀಯ ನಾಯಕತ್ವಕ್ಕೆ ಹಂಬಲಿಸದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ದುರಂತವೇ ಸರಿ. ಭಾರತದಂಥ ರಾಷ್ಟ್ರದಲ್ಲಿ ವಿದ್ಯಾವಂತ ಯುವಶಕ್ತಿ ಯಾಕೆ ರಾಜಕೀಯಕ್ಕೆ ಬರಲು ಹಿಂದೇಟು ಹಾಕುತ್ತಿದೆ ಎಂದು ಪ್ರಶ್ನಿಸಿದರೆದೊರೆಯುವ ಉತ್ತರವೆಂದರೆ, ‘ಹಣದ ಕೊರತೆ’. ಹಾಗಾದರೆ ಹಣಬಲವಿಲ್ಲದೆ ರಾಜಕೀಯದಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲವೇ?

ಚುನಾವಣಾ ರಾಜಕೀಯದ ವಿದ್ಯಮಾನಗಳನ್ನು ಅವಲೋಕಿಸಿದರೆ ಹಣವಿಲ್ಲದೆ ಈ ಕ್ಷೇತ್ರದಲ್ಲಿ ಯಶಸ್ವಿಯಾಗುವುದು ಅಸಾಧ್ಯ ಎನಿಸುತ್ತದೆ. ಹಣ, ಹೆಂಡಹೇರಳವಾಗಿ ಹಂಚಿಕೆಯಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಪ್ರತೀ ಚುನಾವಣೆ ಸಂದರ್ಭದಲ್ಲೂ ಈ ಬಗ್ಗೆ ವರದಿಯಾಗುತ್ತದೆ. ಅಧಿಕಾರಿಗಳು ದಾಳಿ ನಡೆಸಿ ಕೋಟಿ ಕೋಟಿ ನಗದು ವಶಪಡಿಸಿಕೊಳ್ಳುವುದೂ ಸಾಮಾನ್ಯ ಎಂಬಂತಾಗಿದೆ. ಚುನಾವಣೆಯಲ್ಲಿ ಹಣ ಸುರಿದು ಆರಿಸಿಬರುವ ಜನಪ್ರತಿನಿಧಿ ತಾನು ಹೂಡಿದ್ದರ ಹತ್ತು ಪಟ್ಟು ಹೆಚ್ಚು ಹಣವನ್ನು ಮುಂದಿನ ಐದು ವರ್ಷಗಳ ಅವಧಿಯಲ್ಲಿ ಬಾಚದೆ ಇರುತ್ತಾನೆಯೇ? ಜನರು ಮತ ಮಾರಿಕೊಳ್ಳುವುದರಿಂದ ಆಗುವ ಪರಿಣಾಮಗಳನ್ನು ಈಗಾಗಲೇ ಅನುಭವಿಸುತ್ತಿದ್ದೇವೆ.

ಭಾರತದಲ್ಲಿ ಬಹುತೇಕ ರಾಜಕಾರಣಿಗಳು ಕೋಟ್ಯಧಿಪತಿಗಳು. ಆದರೆ ಅವರನ್ನು ಆಯ್ಕೆ ಮಾಡಿ ಕಳುಹಿಸುವವರಲ್ಲಿ ಹೆಚ್ಚಿನವರು ಬಡವರು. ‘ಗ್ರಾಮೀಣ ಭಾಗದಲ್ಲಿ ಕನಿಷ್ಠ ಐದು ಜನರಿರುವ ದಲಿತ ಕುಟುಂಬಗಳು ದಿನ ಒಂದಕ್ಕೆ 69 ರೂಪಾಯಿಯಲ್ಲಿ ಜೀವನ ನಡೆಸಬೇಕಾಗುತ್ತಿದೆ’ ಎಂಬ ವಾಸ್ತವವೂ ನಮ್ಮ ಮುಂದಿದೆ.

ADVERTISEMENT

ಜನಪ್ರತಿನಿಧಿಯಾಗಿ ಆಯ್ಕೆಯಾಗುವ ವ್ಯಕ್ತಿಯೊಬ್ಬ ತನ್ನ ಆಸ್ತಿಯನ್ನು ಕೆಲವೇ ವರ್ಷಗಳಲ್ಲಿ ಹಲವು ಪಟ್ಟು ಹೆಚ್ಚಿಸಿಕೊಳ್ಳುತ್ತಾನೆ. ಈ ಬಗ್ಗೆ ಸಾಕಷ್ಟು ವರದಿಗಳೂ ಬಂದಿವೆ. ಬೇರೆ ಯಾವುದೇ ಉದ್ಯೋಗದಲ್ಲಿ ಈ ಪ್ರಮಾಣದ ಬೆಳವಣಿಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ಈಗ ರಾಜಕೀಯವು ಹಣ ಗಳಿಕೆಯ ಮಾಧ್ಯಮವಾಗಿದೆ. ಈ ಕಾರಣಕ್ಕೇ ಡಾ.ಬಿ.ಆರ್. ಅಂಬೇಡ್ಕರ್ ರವರು 1952ರಲ್ಲಿಯೇ, ‘ಭಾರತದಲ್ಲಿ ಯಾಕೆ ಶೂನ್ಯ ಆಯವ್ಯಯ ಚುನಾವಣೆಗಳನ್ನು ನಡೆಸಬಾರದು’ ಎಂದು ನೆಹರೂ ಅವರನ್ನು ಪ್ರಶ್ನಿಸಿದ್ದರು. ಆ ಪ್ರಶ್ನೆ ಇಂದು ಇನ್ನಷ್ಟು ಪ್ರಸ್ತುತ ಎನಿಸುತ್ತದೆ.

ಚುನಾವಣೆ ಸಮಯದಲ್ಲಿ ರಾಜಕಾರಣಿಗಳಿಗೆ ಅಥವಾ ರಾಜಕೀಯ ಪಕ್ಷಗಳಿಗೆ ಹಣ ಎಲ್ಲಿಂದ ಬರುತ್ತದೆ ಮತ್ತು ಖರ್ಚು ಮಾಡಿದ ಹಣವನ್ನು ಹೇಗೆ ಮತ್ತು ಯಾವ ಮೂಲಗಳಿಂದ ಪಡೆಯುತ್ತಾರೆ ಎನ್ನುವುದು ಎಲ್ಲರೂ ಯೋಚಿಸಬೇಕಾದ ವಿಷಯ. ಉದ್ಯಮಪತಿಗಳು, ದಾನಿಗಳು ರಾಜಕೀಯ ಪಕ್ಷಗಳಿಗೆ ಏಕೆ ಹಣ ನೀಡುತ್ತಾರೆ, ಪಕ್ಷಗಳು ಅಧಿಕಾರಕ್ಕೆ ಬಂದ ನಂತರ ಅವರಿಗೆ ಈ ಪಕ್ಷಗಳು ಯಾವ ರೀತಿ ನೆರವಾಗುತ್ತವೆ ಎನ್ನುವುದನ್ನು ನಾವು ಮನಗಾಣಬಹುದು.

ರಾಜಕೀಯ ಮತ್ತು ಹಣ ಒಂದನ್ನು ಬಿಟ್ಟು ಇನ್ನೊಂದಿಲ್ಲ. ಹಣ ಚೆಲ್ಲಿ ಚುನಾವಣೆ ಗೆಲ್ಲುವ ಪರಿಪಾಟವು ರಾಜಕೀಯದಲ್ಲಿ ಭ್ರಷ್ಟತೆಯನ್ನು ಹುಟ್ಟು ಹಾಕಿದೆ. ಅದು ಈಗ ಎಲ್ಲಾ ವಲಯಗಳಿಗೂ ಹಬ್ಬಿಕೊಂಡಿದೆ. ಇದಕ್ಕೆ ತಡೆಯೊಡ್ಡಲು ಸಾಧ್ಯವಾಗದಿದ್ದರೆ ಭಾರತಕ್ಕೆ ಭವಿಷ್ಯವಿಲ್ಲ. ಜನರು ಬದಲಾದಾಗ ಮಾತ್ರ ನಾಯಕರೂ ಬದಲಾಗುತ್ತಾರೆ. ಪ್ರಜಾಪ್ರಭುತ್ವದ ಆಶಯವನ್ನು ಸರಿಯಾಗಿ ಗ್ರಹಿಸುವ ವ್ಯವಧಾನ ಯಾರಲ್ಲೂ ಇಲ್ಲ. ಎಲ್ಲವೂ ರಾಜಕೀಯ ಮೇಲಾಟ. ಇದಕ್ಕೆಲ್ಲ ‘ಹಣರಹಿತ ಚುನಾವಣೆ’ ತಡೆಯೊಡ್ಡಬಲ್ಲದು.ಹಳಿ ತಪ್ಪಿದ ವ್ಯವಸ್ಥೆಯನ್ನು ಪುನಃ ಸರಿಯಾದ ಮಾರ್ಗಕ್ಕೆ ತರಬಲ್ಲದು. ಇದು ರಾಜಕಿಯ ವ್ಯವಸ್ಥೆಯನ್ನು ತಿದ್ದಿ, ಪ್ರಜಾಪ್ರಭುತ್ವವನ್ನು ಅರ್ಥಪೂರ್ಣಗೊಳಿಸುವ ಪ್ರಯತ್ನವಾಗಿದೆ.

ನಾಟಕಕಾರ ಬರ್ಟೋಲ್ಟ್ ಬ್ರೆಕ್ಟ್ ಪ್ರಕಾರ, ‘ಅನಕ್ಷರಸ್ಥರಲ್ಲಿ ರಾಜಕೀಯ ಅನಕ್ಷರಸ್ಥನೇ ಅತಿಕೆಟ್ಟ ಅನಕ್ಷರಸ್ಥ’. ನಮ್ಮ ಬದುಕಿನಲ್ಲಿ ರಾಜಕೀಯಕ್ಕಿರುವ ಮಹತ್ವ ಅವರ ಮಾತಿನಲ್ಲಿ ಧ್ವನಿಸುತ್ತದೆ. ಆದಕಾರಣ, ಪ್ರಜಾಪ್ರಭುತ್ವ ಉತ್ತಮಗೊಳ್ಳಬೇಕಾದರೆ ವಿದ್ಯಾವಂತರು ರಾಜಕೀಯದ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಈ ಪ್ರಕ್ರಿಯೆಯಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗವಹಿಸಬೇಕು.

ಚುನಾವಣಾ ಆಯೋಗವು ಚುನಾವಣೆಗಳನ್ನು ನಡೆಸುವುದಕ್ಕೆ ಸೀಮಿತವಾಗದೆ, ಪ್ರತೀ ಅಭ್ಯರ್ಥಿಯ ಪ್ರಚಾರ ವೆಚ್ಚವನ್ನು ತಾನೇ ನೋಡಿಕೊಳ್ಳುವುದು ಸೂಕ್ತವೆನಿಸುತ್ತದೆ. ಇದರಲ್ಲಿ ಯಾವುದೇ ಪಕ್ಷದ ಯಾವುದೇ ಅಭ್ಯರ್ಥಿಯ ಹಸ್ತಕ್ಷೇಪವಿರಬಾರದು. ಆಗ ಖರ್ಚು ಮಾಡುವ ಪ್ರಮೇಯವೇ ಅಭ್ಯರ್ಥಿಗಳಿಗೆ ಬರದೆ, ಹಣರಹಿತ ಚುನಾವಣೆಗಳನ್ನು ಮಾಡಲು ಸಾಧ್ಯವಾಗುವುದು. ಗೆದ್ದು ಬಂದ ಮೇಲೆ ಹಣ ರಾಶಿ ಹಾಕಿಕೊಳ್ಳುವ ದಂಧೆಗೆ ಸ್ವಲ್ಪವಾದರೂ ಕಡಿವಾಣ ಬೀಳಬಹುದು. ಶೂನ್ಯ ಆಯವ್ಯಯ ಚುನಾವಣೆಗಳು ನಡೆದರೆ ಇನ್ನಷ್ಟು ವಿದ್ಯಾವಂತರು, ನಾಯಕತ್ವ ಗುಣವುಳ್ಳ ಯುವಕರು ರಾಜಕೀಯಕ್ಕೆ ಬರಬಹುದು. ಇದರಿಂದ, ರಾಜಕೀಯದಲ್ಲಿ ಎಲ್ಲಾ ವರ್ಗದವರಿಗೆ ಪ್ರಾತಿನಿಧ್ಯ ಸಿಗಲಿದೆ.

ಇದರ ಕುರಿತು ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಚರ್ಚೆಗಳು ಏರ್ಪಡಬೇಕು. ಸಂವಿಧಾನದಲ್ಲಿ ಸೂಕ್ತ ಮಾರ್ಪಾಡುಗಳನ್ನು ತರುವ ಕೆಲಸವಾಗಬೇಕು. ಚುನಾವಣಾ ಆಯೋಗವು ಇನ್ನಷ್ಟು ಜವಾಬ್ದಾರಿ ಹೊರಲು ಸಿದ್ಧವಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.