ADVERTISEMENT

ಭಾನುವಾರ, 15-4-1962

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2012, 19:30 IST
Last Updated 14 ಏಪ್ರಿಲ್ 2012, 19:30 IST

ನವ ಮೈಸೂರಿನ ಶಿಲ್ಪಿ ಡಾ. ಎಂ. ವಿಶ್ವೇಶ್ವರಯ್ಯ ಕಣ್ಮರೆ

ಬೆಂಗಳೂರು, ಏ. 14 - ವಿಶ್ವವಿಖ್ಯಾತ ಶಿಲ್ಪಿ, ಭಾರತ ರತ್ನ ಮೈಸೂರಿನ ಡಾ. ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಇಂದು ಬೆಳಿಗ್ಗೆ 6-15ರ ಸಮಯದಲ್ಲಿ ಕಬ್ಬನ್ ರಸ್ತೆಯಲ್ಲಿರುವ ತಮ್ಮ ಗೃಹದಲ್ಲಿ ವಿಧಿವಶರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಕಳೆದ ಕೆಲವು ತಿಂಗಳಿಂದ ಹಾಸಿಗೆ ಹಿಡಿದಿದ್ದ ಡಾ. ಎಂ. ವಿ. ಅವರ ದೇಹಸ್ಥಿತಿ ನಿನ್ನೆ ತೀವ್ರಗೊಂಡು ಕಳವಳವನ್ನುಂಟು ಮಾಡಿತ್ತು. `ಮಾದರಿ ಮೈಸೂರು ನಿರ್ಮಾಪಕನ~ ಸಾವಿನ ಸುದ್ದಿ ತತ್‌ಕ್ಷಣವೇ ಊರಲ್ಲೆಲ್ಲ ಹರಡಿ ಜನರು ಅವರ ಮನೆಗೆ ಧಾವಿಸಿ, ಎಂ. ವಿ. ಅವರ ಅಂತ್ಯದರ್ಶನ ಪಡೆದು ಗೌರವ ಸಲ್ಲಿಸಿದರು.

ರಾಜ್ಯ ಗೌರವಗಳೊಡನೆ ಎಂ. ವಿ. ಅಂತಿಮ ಯಾತ್ರೆ

ಬೆಂಗಳೂರು, ಏ. 14 - ಇಂದು ಮಧ್ಯಾಹ್ನಾನಂತರ ನಗರದ ಪ್ರಮುಖ ಬೀದಿಗಳಲ್ಲಿ, ಡಾ. ಎಂ. ವಿ. ಅವರ ಅಂತಿಮ ಯಾತ್ರೆ ನಡೆದು ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಲಕ್ಷಾಂತರ ಮಂದಿ ನಗರದ ಪೌರರು ನಾಡಿಗೆ ಸ್ಮರಣೀಯ ಸೇವೆ ಸಲ್ಲಿಸಿದ ಮಹಾವ್ಯಕ್ತಿಗೆ ಶ್ರದ್ಧಾಂಜಲಿಯನ್ನರ್ಪಿಸಿದರು.

1 ವರ್ಷ 6 ತಿಂಗಳು 29 ದಿನಗಳ ಹಿಂದೆ ನಗರದಲ್ಲಿ ಪ್ರಧಾನಿ ನೆಹರೂ ಆಗಮಿಸಿದ್ದು ಎಂ. ವಿ. ಅವರ ಶತಮಾನೋತ್ಸವದಲ್ಲಿ ನಗರದ ಜನ ಸಂತೋಷದ ಸಂಭ್ರಮದಲ್ಲಿದ್ದರು. ಅಂದು ಪೇಟಧಾರಿಯಾಗಿ ಕಾರಿನಲ್ಲಿ ಕುಳಿತಿದ್ದ ಶತಾಯುವಿನ ದರ್ಶನ ಮಾಡಿದ್ದರು.

ಜನ್ಮಸ್ಥಳ ಮುದ್ದೇನಹಳ್ಳಿಯಲ್ಲಿ ಎಂ. ವಿ. ಅಂತ್ಯ ಸಂಸ್ಕಾರ

ಬೆಂಗಳೂರು, ಏ. 14 - ಸಣ್ಣ ಮಳೆ ಬೀಳುತ್ತಿದ್ದ, ನಂದಿ ಬೆಟ್ಟದ ಸಾಲಿಗೆ ಸೇರಿದ, ಚನ್ನಗಿರಿ ಗುಡ್ಡದ ತಪ್ಪಲಿನಲ್ಲಿ ಗಂಧದ ಮರದ ಚಿತೆಯ ಮೇಲೆ, ರಾತ್ರಿ 9-8ಕ್ಕೆ ಪಿತಾಮಹ ಡಾ. ಎಂ. ವಿ. ಅವರ ಅಂತ್ಯಕ್ರಿಯೆ ನಡೆಯಿತು.

ಎಂ. ವಿ. ಅವರ ಬಯಕೆಯಂತೆ ಅವರ ಜನ್ಮಸ್ಥಳವಾದ ಮುದ್ದೇನಹಳ್ಳಿಯಲ್ಲಿ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು.

ADVERTISEMENT

ರಾಷ್ಟ್ರಪತಿ ಶೋಕ

ನವದೆಹಲಿ, ಏ. 14 - ಡಾ. ಎಂ. ವಿಶ್ವೇಶ್ವರಯ್ಯ ಅವರ ನಿಧನದ ಬಗ್ಗೆ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್‌ರವರು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಕೈಗಾರಿಕೆ, ಆರ್ಥಿಕ ಹಾಗೂ ಆಡಳಿತರಂಗಗಳಲ್ಲಿ ನಮ್ಮ ರಾಷ್ಟ್ರೀಯ ಜೀವನವನ್ನು ತಮ್ಮ ಅಮೂಲ್ಯ ಸೇವೆಯ ಮೂಲಕ ಉಜ್ವಲಗೊಳಿಸಿದ ವ್ಯಕ್ತಿ ತಮ್ಮನ್ನಗಲಿದರೆಂದೂ ಅವರು ಬುದ್ಧಿಶಕ್ತಿಯ ಹಾಗೂ ಸಾರ್ಥಕ ಜೀವನದ ಪ್ರತೀಕವಾಗಿದ್ದರೆಂದು ತಿಳಿಸಿದ್ದಾರೆ.

`ಸಮಗ್ರ ಯೋಜನೆ ರೂಪಿಸಿದ ಮೊದಲಿಗರು~

ಬೆಂಗಳೂರು, ಏ. 14 - `ಡಾ. ಎಂ. ವಿಶ್ವೇಶ್ವರಯ್ಯ ಅವರು ನಿಧನ ಹೊಂದಿದ ದುಃಖಕರ ಸುದ್ದಿಯನ್ನು ಕೇಳಿ ನನಗೆ ಅತ್ಯಂತ ದುಃಖವಾಗಿದೆ. ಮೈಸೂರು ರಾಜ್ಯದ ನಿರ್ಮಾಣದಲ್ಲಿ ಅವರು ಸಲ್ಲಿಸಿದ ನಿಷ್ಠಾವಂತ ಸೇವೆಯನ್ನು ನಾನು ಹಲವಾರು ಸಂದರ್ಭಗಳಲ್ಲಿ ಪ್ರಸ್ತಾಪಿಸಿದ್ದೇನೆ.

ಭಾರತ ಔದ್ಯೋಗೀಕರಣಕ್ಕಾಗಿ ಸಮಗ್ರ ಯೋಜನೆಯನ್ನು ರೂಪಿಸಿದವರಲ್ಲಿ ಅವರು ಮೊದಲಿಗರು. ಅದನ್ನು ನಾವು ಈಗ ನಮ್ಮ ಪಂಚವಾರ್ಷಿಕ ಯೋಜನೆಗಳ ಮೂಲಕ ರೂಪಕ್ಕೆ ತರುತ್ತಿದ್ದೇವೆ. ಅವರ ನಿಧನದಿಂದ ರಾಜನೀತಿಜ್ಞ; ಆರ್ಥಿಕತಜ್ಞ ಮತ್ತು ಎಂಜಿನಿಯರ್‌ರನ್ನು ಕಳೆದು ಕೊಂಡಿದ್ದೇವೆ~.

`ಅವರ ನಿಧನದಿಂದ ಮೈಸೂರು ರಾಜ್ಯಕ್ಕೆ ಮಾತ್ರವೇ ಅಲ್ಲದೇ ಇಡೀ ಭಾರತಕ್ಕೆ ನಷ್ಟವುಂಟಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ~ ಎಂದು ಮೈಸೂರಿನ ರಾಜ್ಯಪಾಲರಾದ ಶ್ರೀ ಜಯಚಾಮರಾಜ ವಡೆಯರ್ ಅವರು ಸಂತಾಪ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.