ADVERTISEMENT

ಭಾನುವಾರ, 9-10-1961

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 19:30 IST
Last Updated 8 ಅಕ್ಟೋಬರ್ 2011, 19:30 IST

ಪಾಕ್ ಹಿಂದೂಗಳ ರಕ್ಷಣೆಗೆ ಕೇಂದ್ರಕ್ಕೆ ಕರೆ
ನವದೆಹಲಿ, ಅ. 8
- ಪಾಕಿಸ್ತಾನದಲ್ಲಿರುವ ಹಿಂದೂ ಅಲ್ಪ ಸಂಖ್ಯಾತರ ಪರವಾಗಿ ಹೋರಾಡಬೇಕೆಂದು ಇಲ್ಲಿ ಸಮಾವೇಶಗೊಂಡಿರುವ ಅಖಿಲ ಭಾರತ ಹಿಂದೂ ಸಮ್ಮೇಳನವು ಇಂದು ನಿರ್ಣಯದ ಮೂಲಕ ಸರ್ಕಾರವನ್ನು ಒತ್ತಾಯ ಪಡಿಸಿದೆ.
ಅಲ್ಪಸಂಖ್ಯಾತರಿಗೆ ರಕ್ಷಣೆಯನ್ನೊದಗಿಸುವಲ್ಲಿ ಪಾಕಿಸ್ತಾನ ವಿಮುಖಗೊಂಡಿದೆಯೆಂದೂ, ಆದುದರಿಂದ ಅವರಿಗೆ ರಕ್ಷಣೆ ನೀಡುವುದು ಭಾರತ ಸರ್ಕಾರದ ಕರ್ತವ್ಯವೆಂದೂ ಸಮ್ಮೇಳನವು ಅಭಿಪ್ರಾಯಪಟ್ಟಿದೆ.

ಕೃಷ್ಣಮೆನನ್ ಮಿದುಳಿನ ಮೇಲೆ ಶಸ್ತ್ರಚಿಕಿತ್ಸೆ
ನ್ಯೂಯಾರ್ಕ್, ಅ. 8
- ಭಾರತದ ರಕ್ಷಣಾ ಸಚಿವ ಹಾಗೂ ವಿಶ್ವರಾಷ್ಟ್ರ ಸಂಸ್ಥೆಗೆ ಭಾರತ ನಿಯೋಗದ ನಾಯಕರಾದ ಶ್ರೀ ವಿ. ಕೆ. ಕೃಷ್ಣಮೆನನ್ ಅವರ ಮಿದುಳಿನ ಮೇಲೆ ಇಂದು ಶಸ್ತ್ರಚಿಕಿತ್ಸೆಯೊಂದು ನಡೆದು ಅವರು ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಒಂದು ಗಂಟೆಯ ಕಾಲ ನಡೆದ ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಶ್ರೀ ಮೆನನ್‌ರು ಸ್ವಸ್ಥರಾಗಿ ವಿಶ್ರಾಂತಿ ಹೊಂದು ತ್ತಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.

ಭಾಷಾ, ಕೋಮುವಾದ ತಾತ್ಕಾಲಿಕ ಎಂದು ದೇಶಮುಖ್
ನವದೆಹಲಿ, ಅ. 8
- ಭಾಷಾವಾದ, ಪ್ರಾದೇಶಿಕವಾದ ಮತ್ತು ಕೋಮುವಾದಗಳು ತಾತ್ಕಾಲಿಕವಾದವು ಗಳಾಗಿದ್ದು, ಪ್ರಜಾ ಸತ್ತಾತ್ಮಕ ಕಲ್ಯಾಣ ರಾಜ್ಯ ನಿರ್ಮಾಣದ ಬಗ್ಗೆ ರಾಷ್ಟ್ರದ ಯೋಜನೆಗಳ ಪೂರೈಕೆಗೆ ಅನತಿ ಕಾಲದಲ್ಲೇ ಇವು ಶರಣಾಗುವುದೆಂದು ತಮಗೆ ಮನವರಿಕೆ ಯಾಗಿರುವುದಾಗಿ ಕೇಂದ್ರದ ಮಾಜಿ ಅರ್ಥ ಸಚಿವ ಶ್ರೀ ಸಿ. ಡಿ. ದೇಶಮುಖ್‌ರವರು ಇಂದು ಇಲ್ಲಿ ಹೇಳಿದರು.

ರಾಜಕೀಯ ಪಕ್ಷಗಳು ಹಾಗೂ ಆಡಳಿತಯಂತ್ರ ತಮ್ಮ ಕಾರ್ಯವನ್ನು ಸಮನಾಗಿ ನಿರ್ವಹಿಸಿದರೆ ಮಾತ್ರ ಇದು ಸಾಧ್ಯವೆಂದು ಅವರು ನುಡಿದರು.

ನಾಚಿಕೆಗೇಡಿನ ವಿಷಯ ಎಂದು ಸಂಜೀವರೆಡ್ಡಿ
ತಿರುವನಂತಪುರ, ಅ. 8
- ದೆಹಲಿಯಲ್ಲಿ ರಾಷ್ಟ್ರೀಯ ಸಂಘಟನಾ ಸಮ್ಮೇಳನವು ಮುಕ್ತಾಯವಾದ ಕೆಲವೇ ದಿನಗಳಲ್ಲಿ ಆಲಿಘರ್ ಮತ್ತು ಇತರ ಕಡೆಗಳಲ್ಲಿ ಕೋಮು ವಾರು ಘರ್ಷಣೆಗಳು ನಡೆದುದನ್ನು ಕೇಳಲು ಎಲ್ಲರಿಗೂ ನಾಚಿಕೆಗೇಡಿನ ವಿಷಯವೆಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎನ್. ಸಂಜೀವರೆಡ್ಡಿಯವರು ಇಂದು ತಿಳಿಸಿದರು.

ವಿದ್ಯಾರ್ಥಿ ಸಭೆಯೊಂದನ್ನುದ್ದೇಶಿಸಿ ಮಾತನಾಡುತ್ತಾ ಅವರು, ಅದು ನಮ್ಮನ್ನು ಎಲ್ಲಿಗೊಯ್ಯುತ್ತದೆ ಎಂದು ಕೇಳಿ, `ಈ ಹುಚ್ಚುತನ ನನಗೆ ಅರ್ಥವಾಗದು~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.