ADVERTISEMENT

ಮಂಗಳವಾರ, 11–6–1968

​ಪ್ರಜಾವಾಣಿ ವಾರ್ತೆ
Published 10 ಜೂನ್ 2018, 19:55 IST
Last Updated 10 ಜೂನ್ 2018, 19:55 IST

ದಂಗೆಕೋರ ನಾಗಾಗಳಲ್ಲಿ ಕ್ಷಿಪ್ರ ಕ್ರಾಂತಿ

ಕೊಹಿಮಾ, ಜೂನ್ 10– ನಾಗಾ ದಂಗೆಕೋರರ ಹಂಗಾಮಿ ದಂಡನಾಯಕ ಜ. ಜುಹೇಟೊ ಮತ್ತು ಅವರ ಇಬ್ಬರು ಸಹವರ್ತಿಗಳನ್ನು ಭಿನ್ನಮತೀಯ ನಾಯಕ ಜ. ಕೈಟೋರವರು ಬಂಧಿಸಿರುವುದರಿಂದ ನಾಗಾರಾಜ್ಯದಲ್ಲಿ ಅನಿರೀಕ್ಷಿತವಾಗಿ ಪ್ರಕೋಪ ಪರಿಸ್ಥಿತಿ ಉಂಟಾಗಿದೆ.

**

ADVERTISEMENT

ಅನೇಕ ಕಡೆ ಘರ್ಷಣೆ

ಕೊಹಿಮಾ, ಜೂನ್ 10– ಇಲ್ಲಿಗೆ 12 ಮೈಲಿಗಳ ದೂರದಲ್ಲಿರುವ ಖೊನೋಮ ಗ್ರಾಮದಲ್ಲಿ ನಾಗಾ ದಂಗೆಕೋರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಘರ್ಷಣೆಗಳು ಇನ್ನೂ ಹೆಚ್ಚಿನ ಪ್ರದೇಶಗಳಿಗೆ ವಿಸ್ತರಿಸಲ್ಪಟ್ಟವು.

**

ತೀವ್ರ ಕಾರ್ಯಾಚರಣೆ

ಕೊಹಿಮಾ, ಜೂನ್ 10– ಇಲ್ಲಿಗೆ ಎಂಟು ಮೈಲಿ ದೂರದಲ್ಲಿನ ಪರ್ವತ ಪ್ರದೇಶದಲ್ಲಿ ಅಡಗಿಕೊಂಡಿರಬಹುದಾದ ಗುಪ್ತ ನಾಗಾ ಗೆರಿಲ್ಲಾಗಳನ್ನು ಪತ್ತೆಹಚ್ಚಿ, ಅವರನ್ನು ಸದೆ ಬಡಿಯಲು ಭದ್ರತಾ ಪಡೆಗಳು ಇನ್ನೂ ನಿರತವಾಗಿವೆ.

ಚೀನದಲ್ಲಿ ತರಬೇತಿ ಪಡೆದ ಈ ಗುಪ್ತ ನಾಗಾ ಗೆರಿಲ್ಲಾಗಳೊಡನೆ ಕಳೆದ ವಾರ ಭದ್ರತಾ ಪಡೆಗಳು ತೀವ್ರ ಹೋರಾಟದಲ್ಲಿ ತೊಡಗಿ, ಅನೇಕ ಮಂದಿ ದಂಗೆಕೋರರನ್ನು ಸದೆಬಡಿದವು.

**

ನಾಗಪುರದಲ್ಲಿ ಕೋಮು ಗಲಭೆ ಇಬ್ಬರ ಸಾವು, 300 ಮನೆ ಭಸ್ಮ

ನಾಗಪುರ, ಜೂನ್ 10– ನಾಗಪುರದ ಟಿಕ ಹಾಗೂ ಪಂಚಶೀಲನಗರ ಪ್ರದೇಶಗಳಲ್ಲಿ ಇಂದು ರಾತ್ರಿ ಬಹಳ ಹೊತ್ತಿನ ನಂತರ ಹಠಾತ್ತನೆ ಕೋಮುವಾರು ಗಲಭೆ ಉಂಟಾಗಿ ಇಬ್ಬರು ಸತ್ತರಲ್ಲದೆ 300 ಮನೆಗಳು ಭಸ್ಮವಾದವು.

ಎರಡು ಕೋಮುಗಳ ನಡುವೆ ಉಂಟಾದ ಸಣ್ಣ ಜಗಳದ ಕಾರಣ ಮನೆಗಳಿಗೆ ಬೆಂಕಿ ಹಚ್ಚಲಾಯಿತೆಂದು ಪೋಲೀಸರ ವರದಿ.

ಎರಡು ಕೋಮುಗಳಿಗೆ ಸೇರಿದ 30 ಮಂದಿಯನ್ನು ಪೋಲೀಸರು ಬಂಧಿಸಿದ್ದಾರೆ.

**

ಮಾರುಕಟ್ಟೆ ಶಾಸನ ಬದಲಾವಣೆ ಪ್ರಶ್ನೆ ಇಲ್ಲ: ಮುಖ್ಯಮಂತ್ರಿ

ಬೆಂಗಳೂರು, ಜೂನ್ 10– ವ್ಯವಸಾಯೋತ್ಪನ್ನ ಮಾರುಕಟ್ಟೆ ಶಾಸನವನ್ನಾಗಲಿ, ವಿಧಿಗಳನ್ನಾಗಲಿ ರದ್ದುಪಡಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು, ಇಂದು ತಮ್ಮನ್ನು ಭೇಟಿ ಮಾಡಿದ ರಾಜ್ಯದ ವರ್ತಕರ ನಿಯೋಗಕ್ಕೆ ಸ್ಪಷ್ಟಪಡಿಸಿದರು.

‘ಆದರೆ ಶಾಸನದ ಕಾರ್ಯಮಿತಿಗೊಳಪಟ್ಟ ಯಾವುದಾದರೂ ಹೊಂದಾಣಿಕೆಯಾಗಿದ್ದರೆ, ಅದನ್ನು ಪರಿಶೀಲಿಸೋಣ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.