ADVERTISEMENT

ಶುಕ್ರವಾರ, 14–6–1968

​ಪ್ರಜಾವಾಣಿ ವಾರ್ತೆ
Published 13 ಜೂನ್ 2018, 20:11 IST
Last Updated 13 ಜೂನ್ 2018, 20:11 IST

ನೆಲಕ್ಕೆ ಅಪ್ಪಳಿಸಿ ಜೆಟ್ ಅಪಘಾತ

ಕಲ್ಕತ್ತ ಬಳಿ ದುರಂತ, ಆರು ಮಂದಿ ಸಾವು

(ಪ್ರಜಾವಾಣಿ ಪ್ರತಿನಿಧಿಯಿಂದ)

ADVERTISEMENT

ಕಲ್ಕತ್ತ, ಜೂನ್ 13– ಅರವತ್ತೆರಡು ಮಂದಿ ಪ್ರಯಾಣಿಕರು ಹಾಗೂ ಚಾಲಕ ವರ್ಗದವರಿದ್ದ ಬೋಯಿಂಗ್ 707 ಪಾನ್ ಅಮೆರಿಕನ್ ಏರ್‌ವೇಸ್‌ಜೆಟ್ ವಿಮಾನ ಡಂ ಡಂ ವಿಮಾನ ನಿಲ್ದಾಣವಿರುವ ಬತ್ತದ ಗದ್ದೆಯಲ್ಲಿ ಬಿದ್ದು ಇಂದು ಬೆಳಗಿನ ಜಾವ ಅಪಘಾತಕ್ಕೀಡಾಗಿ ಆರು ಮಂದಿ ಮೃತರಾಗಿದ್ದಾರೆ.

ವಯಸ್ಸಿನಲ್ಲಿ ಯುವಕರು ಉತ್ಸಾಹ ಶೂನ್ಯರು

ಬೆಂಗಳೂರು, ಜೂ. 13– ಶ್ರೀ ವೀರೇಂದ್ರ ಪಾಟೀಲರ ಮಂತ್ರಿಮಂಡಲ ವಯಸ್ಸಿನಲ್ಲಿ ‘ಯುವಕರದಾಗಿದ್ದರೂ ಉತ್ಸಾಹ ಶೂನ್ಯವಾಗಿದೆ’.

ರಾಜ್ಯದ ಹೊಸ ಮಂತ್ರಿಮಂಡಲ ಕುರಿತು, ವಿರೋಧ ಪಕ್ಷದ ನಾಯಕ ಶ್ರೀ ಎಸ್. ಶಿವಪ್ಪ ಅವರ ವರ್ಣನೆಯಿದು.

ಕೆನಡಿ ಕೊಲೆ ಉದ್ದೇಶ ಬಗ್ಗೆ ಹೊಸ ಸುಳಿವು

ಲಂಡನ್, ಜೂ. 13– ಸೆನೆಟರ್ ರಾಬರ್ಟ್ ಕೆನೆಡಿ ಅವರನ್ನು ಕೊಂದನೆಂದು ಆರೋಪಿಸಲಾಗಿರುವ ಶಿರಾನ್ 1964ರಲ್ಲಿ ಮತ್ತು 1966ರಲ್ಲಿ ಪಶ್ಚಿಮ ಏಷ್ಯಾಕ್ಕೆ ಹಿಂದಿರುಗಿದ್ದನೆಂಬುದಕ್ಕೆ ಅರಬ್ ಸರಕಾರವೊಂದರ ಬಳಿ ಸಾಕ್ಷ್ಯ ಇದೆಯೆಂದು ಬ್ರಿಟಿಷ್ ಪತ್ರಿಕೆ ಈವಿನಿಂಗ್ ಸ್ಟಾಂಡರ್ಡ್ ಇಂದು ತಿಳಿಸಿದೆ.

ಈ ಕೊಲೆ ಉದ್ದೇಶ ಮತ್ತು ಅದಕ್ಕೆ ಬೆಂಬಲವಾಗಿದ್ದ ಕೂಟದ ಬಗ್ಗೆ ತನಿಖೆಗೆ ಇದರಿಂದ ಹೊಸ ಸುಳಿವು ಸಿಗಬಹುದೆಂದು ಅದು ಹೇಳಿದೆ.

ಬೆಂಗಳೂರು–ಸೇಲಂ ಮಧ್ಯೆ ರೈಲು ಸಂಚಾರ

ಉದಕಮಂಡಲ, ಜೂ. 13– ಬೆಂಗಳೂರು ಸೇಲಂ ರೈಲು ಮಾರ್ಗ ಕಾರ್ಯ ಇನ್ನೇನು ಮುಕ್ತಾಯಗೊಂಡಿದ್ದು ಈ ತಿಂಗಳ 21 ರಿಂದ ಗೂಡ್ಸ್ ಗಾಡಿಗಳ ಸಂಚಾರ ಪ್ರಾರಂಭವಾಗಲಿದೆ. ಇನ್ನೆರಡು ತಿಂಗಳುಗಳಲ್ಲಿ ಪ್ಯಾಸೆಂಜರ್ ರೈಲುಗಳ ಸಂಚಾರ ಪ್ರಾರಂಭವಾಗುವುದೆಂದು ರೈಲ್ವೆ ಶಾಖೆ ಉಪಸಚಿವ ಶ್ರೀ ಆರ್. ಚತುರ್ವೇದಿಯವರು ಇಂದು ಇಲ್ಲಿ ತಿಳಿಸಿದರು.

ಜುಲೈನಲ್ಲಿ ಇರಾನ್‌ಗೆ ಶ್ರೀ ಮುರಾರಜಿ

ನವದೆಹಲಿ, ಜೂ. 13– ಉಪಪ್ರಧಾನಿ ಶ್ರೀ ಮುರಾರಜಿ ದೇಸಾಯ್ ಅವರು ಮುಂದಿನ ತಿಂಗಳು ಇರಾನ್‌ಗೆ ಭೇಟಿ ಕೊಡಲಿದ್ದಾರೆ. ಅವರ ಕಾರ್ಯಕ್ರಮಗಳನ್ನು ಸಿದ್ಧಪಡಿಸಲಾಗುತ್ತಿದೆ.

ಮಂಡ್ಯ ಸಕ್ಕರೆ ಕಾ‌ರ್ಖಾನೆ ಬಳಿ ಧರಣಿ ಮುಷ್ಕರ

ಮಂಡ್ಯ, ಜೂ. 13– ಮಂಡ್ಯ ಸಕ್ಕರೆ ಕಾರ್ಖಾನೆ ಬಳಿ ಧರಣೀ ಮುಷ್ಕರ ಎರಡನೆ ದಿನವಾದ ಇಂದು ಮುಂದುವರೆಯಿತು.

ಸರ್ವಶ್ರೀ ಕೆ. ರಾಮೇಗೌಡ, ಎಂ.ಎಲ್. ಬೋರಯ್ಯ, ಎಂ.ಎಲ್. ಶಿವರಾಂ, ಬಿ. ಶಿವಗಾರ, ಡಿ.ಎಂ. ಶಿವಲಿಂಗಯ್ಯ, ಬಿ.ಎಸ್. ಕೃಷ್ಣೇಗೌಡ ಮತ್ತು ಚಾಮಲಾಪುರ ಚನ್ನೇಗೌಡ ಅವರು ಇಂದು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

ನಗರದಲ್ಲಿ ಇನ್ನೊಂದು ಐ.ಟಿ.ಐ.

ಬೆಂಗಳೂರು, ಜೂ. 13– ಭಾರತೀಯ ಟೆಲಿಫೋನ್ ಕಾರ್ಖಾನೆ (ಐ.ಟಿ.ಐ.)ಯ ಉದ್ದೇಶಿತ ಎರಡನೆಯ ಘಟಕವನ್ನು ಮೈಸೂರು ರಾಜ್ಯದಲ್ಲಿಯೇ ಸ್ಥಾಪಿಸಬೇಕೆಂದು ಕೇಂದ್ರಕ್ಕೆ ರಾಜ್ಯ ಸರ್ಕಾರ ಮತ್ತೊಮ್ಮೆ ತಿಳಿಸಿದೆ.

ನಗರದಲ್ಲಿರುವ ಕಾರ್ಖಾನೆಯನ್ನು ವಿಸ್ತರಿಸಲು ಸೀಮಿತ ಅವಕಾಶವಿರುವುದರಿಂದ ಮತ್ತೊಂದು ಘಟಕವನ್ನು ತೆರೆಯಬೇಕೆಂದು ಕೇಂದ್ರ ಸರ್ಕಾರ ಯೋಚಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.