ADVERTISEMENT

ಸೋಮವಾರ, 4–3–1968

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2018, 19:30 IST
Last Updated 3 ಮಾರ್ಚ್ 2018, 19:30 IST

* ಕಚತೀವ್‌ನಿಂದ ಸಿಂಹಳ ಕಾಲ್ತೆಗೆಯದು
ಕೊಲಂಬೊ, ಮಾ. 3–
ಭಾರತ–ಸಿಂಹಳ ನಡುವಣ ಪಾಕ್‌ ಜಲಸಂಧಿಯಲ್ಲಿರುವ ನಿರ್ಜನ ದ್ವೀಪವಾದ ಕಚತೀವ್‌ನಿಂದ ಸಿಂಹಳ ಕಾಲ್ತೆಗೆಯದು ಎಂದು ಸಿಂಹಳದ ವಿದೇಶಾಂಗ ಖಾತೆ ವೃತ್ತಗಳು ಇಂದು ಇಲ್ಲಿ ತಿಳಿಸಿವೆ.

ಈ ದ್ವೀಪವನ್ನು ಆಕ್ರಮಿಸಲಾಗಿದೆಯೆಂದು ಕೆಲವು ಮಂದಿ ಭಾರತೀಯರು ಕಳೆದ ವಾರ ತಿಳಿಸಿದ್ದರೆಂದೂ ಹೇಳಿದೆ. ಬಂಜರು, ಪಾಪಸ್‌ಕಳ್ಳಿಯಿಂದ ತುಂಬಿದ ಈ ಚಿಕ್ಕ ದ್ವೀಪ ಶುಕ್ರವಾರ ಸುದ್ದಿಗೆ ಬಂತು.

* ದೀನದಯಾಳ್‌ ಕೊಲೆ ರಹಸ್ಯ ಪತ್ತೆ?
ವಾರಾಣಸಿ, ಮಾ. 3–
ಜನ ಸಂಘದ ದಿವಂಗತ ನಾಯಕ ದೀನದಯಾಳ್‌ ಉಪಾಧ್ಯಾಯರಿಗೆ ಸೇರಿದ್ದ ಕ್ಯಾನ್ವಾಸ್‌ ಚೀಲ, ಚಪ್ಪಲಿ, ಟೂತ್‌ಪೇಸ್ಟ್‌ ಮತ್ತು ಕನ್ನಡಕಗಳನ್ನು ವಾರಾಣಸಿ ಮತ್ತು ಮೊಗಲ್‌ ಸರಾಯಿಗಳ ಮೂರು ವಿವಿಧ ಸ್ಥಳಗಳಲ್ಲಿ ಪೊಲೀಸರು ವಶಪಡಿಸಿಕೊಂಡಿರುವರೆಂದು ಗೊತ್ತಾಗಿದೆ.

ADVERTISEMENT

ಟ್ರೈನುಗಳಿಂದ ಕಳವು ಮಾಡಿದ ವಸ್ತುಗಳ ಮಾರಾಟಗಾರನಿಂದ ಈ ವಸ್ತುಗಳನ್ನು ಕೊಂಡ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಬಂಧನಗಳಿಂದ ಜನಸಂಘದ ನಾಯಕನ ಕೊಲೆ ರಹಸ್ಯ ಪತ್ತೆಯಾಗಿರುವುದಾಗಿ ಪೊಲೀಸರು ಹೇಳಿದ್ದಾರೆ. ಉಪಾಧ್ಯಾಯರ ವಸ್ತುಗಳನ್ನು ಕಳವು ಮಾಡುವುದೇ ಕೊಲೆಯ ಹಿಂದೆ ಇದ್ದ ಉದ್ದೇಶವೆಂದು ಅವರು ತಿಳಿಸಿದ್ದಾರೆ.

* ಆಂಧ್ರ ರಾಜ್ಯಪಾಲರಾಗಿ ಪಿ.ಸಿ. ಸೇನ್‌?
ಹೈದರಾಬಾದ್‌, ಮಾ. 3–
ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಶ್ರೀ. ಪಿ.ಸಿ. ಸೇನ್‌ರವರನ್ನು ಆಂಧ್ರದ ರಾಜ್ಯಪಾಲರಾಗಿ ನೇಮಿಸಲಾಗುವುದೆಂದು ಹೇಳಲಾಗುತ್ತಿದೆ. ಈಗಿನ ರಾಜ್ಯಪಾಲ ಶ್ರೀ ಪಟ್ಟಂಥಾನು ಪಿಳ್ಳೆ ಅವರ ಅಧಿಕಾರಾವಧಿ ಈ ತಿಂಗಳು ಮುಗಿಯುತ್ತದೆ.

* ಶೀಘ್ರವೇ ಇಡೀ ದೇಶದಲ್ಲಿ ಕಾಂಗ್ರೆಸ್‌ ಆಡಳಿತ: ಎಸ್ಸೆನ್‌ ಆಶಾಭಾವನೆ
ಇಂದೂರು, ಮಾ. 3– ಕಾಂಗ್ರೆಸ್‌ ಪಕ್ಷವು ಅತಿ ಶೀಘ್ರವೇ ಹೆಚ್ಚುಕಡಿಮೆ ಎಲ್ಲ ರಾಜ್ಯಗಳಲ್ಲಿಯೂ ಮತ್ತೆ ಅಧಿಕಾರಕ್ಕೆ ಬಂದು ಇಡೀ ದೇಶವನ್ನು ಆಳುವುದೆಂಬ ಆಶಯವನ್ನು ಕಾಂಗ್ರೆಸ್‌ ಅಧ್ಯಕ್ಷ ಶ್ರೀ ಎಸ್‌. ನಿಜಲಿಂಗಪ್ಪ ಅವರು ಇಂದು ಇಲ್ಲಿ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.