ADVERTISEMENT

25 ವರ್ಷಗಳ ಹಿಂದೆ: ಭಾನುವಾರ, 22–1–1995

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 20:00 IST
Last Updated 21 ಜನವರಿ 2020, 20:00 IST

ಈದ್ಗಾ: ಅಂಜುಮನ್ ಮನ ಒಲಿಕೆಗೆ ಯತ್ನ
ಬೆಂಗಳೂರು, ಜ. 21– ಸಮಾಜದಲ್ಲಿ ಸುಮಧುರ ವಾತಾವರಣ ನಿರ್ಮಿಸಲು ಅಂಜುಮನ್ ಇಸ್ಲಾಂ ಸಮಿತಿಯು ಗಣರಾಜ್ಯೋತ್ಸವ ದಿನದಂದು ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಲು ಮುಂದೆ ಬಂದರೆ ಸಹಕರಿಸಲು ಇಂದು ಇಲ್ಲಿ ಸೇರಿದ್ದ ಸರ್ವ ಪಕ್ಷಗಳ ಸಭೆ ಒಮ್ಮತದ ನಿರ್ಧಾರ ತೆಗೆದುಕೊಂಡಿದೆ.

ಈ ನಡುವೆ ರಾಷ್ಟ್ರಧ್ವಜ ಹಾರಿಸಲು ಸರ್ಕಾರ ಅಥವಾ ಅಂಜುಮನ್ ಸಮಿತಿ ಒಪ್ಪದಿದ್ದರೆ ಈ ತಿಂಗಳ 26ರಂದು ಹುಬ್ಬಳ್ಳಿಯಲ್ಲಿ ಲಕ್ಷಾಂತರ ಜನ ಸೇರುವರೆಂದು ಭಾರತೀಯ ಜನತಾ ಪಕ್ಷ ಎಚ್ಚರಿಸಿದೆ. ಅಂಜುಮನ್ ಸಮಿತಿ ಹಾಗೂ ಹುಬ್ಬಳ್ಳಿಯ ಜನತೆ ಸಮಂಜಸ ನಿರ್ಧಾರ ತೆಗೆದುಕೊಳ್ಳುವರು ಎಂದು ಪ್ರದೇಶ ಜನತಾ ದಳದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ಮೊರಾರ್ಜಿಗೆ ಗಾಂಧೀಜಿ ಪ್ರಶಸ್ತಿ ಪ್ರದಾನ
ಮುಂಬೈ, ಜ. 21 (ಪಿಟಿಐ)– ನೂರರ ಹೊಸ್ತಿಲಲ್ಲಿರುವ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಇಂದು 1994ನೇ ಸಾಲಿನ ಮಹಾತ್ಮ ಗಾಂಧಿ ಶಾಂತಿ ಪ್ರಶಸ್ತಿ ಪಡೆದರು.

ADVERTISEMENT

ಅಮೆರಿಕದಲ್ಲಿರುವ ಭಾರತೀಯರ ರಾಷ್ಟ್ರೀಯ ಒಕ್ಕೂಟ ಈ ಪ್ರಶಸ್ತಿ ಸ್ಥಾಪಿಸಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಮೊರಾರ್ಜಿ ಅವರ ನಿವಾಸದಲ್ಲಿಯೇ ನಡೆಯಿತು. ಒಕ್ಕೂಟದ ಎಂಟನೇ ದ್ವೈವಾರ್ಷಿಕ ಸಮ್ಮೇಳನದ ಸಂಚಾಲಕ ಭಾಯಿಲಾಲ್ ಎಂ. ಪಟೇಲ್ ಅವರು ಪ್ರಶಸ್ತಿ ವಿತರಿಸಿದರು.

ಮಹಿಳಾ ಆಯೋಗಕ್ಕೆ ಮಸೂದೆ, ಜಾತಿ ವರ್ಗೀಕರಣಕ್ಕೆ ಉಪಸಮಿತಿ
ಬೆಂಗಳೂರು, ಜ. 21– ರಾಜ್ಯದ ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗಾಗಿ ‘ಮಹಿಳಾ ಆಯೋಗ’ ಸ್ಥಾಪಿಸುವ ಉದ್ದೇಶದಿಂದ ಮುಂದಿನ ಅಧಿವೇಶನದಲ್ಲಿ ಸಮಗ್ರ ಮಸೂದೆ ಮಂಡಿಸಲು ರಾಜ್ಯ ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ.

ಹಾಗೆಯೇ ಶೈಕ್ಷಣಿಕ ಸಂಸ್ಥೆಗಳ ಮತ್ತು ಸರ್ಕಾರಿ ಹುದ್ದೆಗಳ ಮೀಸಲಾತಿ ಸಂಬಂಧ ಪರಿಶಿಷ್ಟ ಜಾತಿ– ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ‘ಜಾತಿ ವರ್ಗೀಕರಣ’ ಮಾಡಲು ಸಂಪುಟದ ಉಪ ಸಮಿತಿ ರಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.