ADVERTISEMENT

25 ವರ್ಷಗಳ ಹಿಂದೆ| ಮಂಗಳವಾರ, 17–1–1995

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 20:10 IST
Last Updated 16 ಜನವರಿ 2020, 20:10 IST

ತಾಲ್ಲೂಕು ಮಟ್ಟದಲ್ಲಿ ತಿಂಗಳಿಗೊಮ್ಮೆ ಜನಸಂಪರ್ಕ ಸಭೆ: ಜಿಲ್ಲಾ ಆಡಳಿತಕ್ಕೆ ಗೌಡರ ತಾಕೀತು

ಬೆಂಗಳೂರು, ಜ. 16– ‘ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರೋಪಾಯಗಳನ್ನು ರೂಪಿಸಲು ಪ್ರತಿ ತಾಲ್ಲೂಕಿನಲ್ಲೂ ಕೊನೇ ಪಕ್ಷ ತಿಂಗಳಿಗೊಮ್ಮೆ ಕಡ್ಡಾಯವಾಗಿ ಜನಸಂಪರ್ಕ ಸಭೆ ನಡೆಸಬೇಕು’ ಎಂದು ಮುಖ್ಯಮಂತ್ರಿ ಎಚ್‌.ಡಿ. ದೇವೇಗೌಡ ಅವರು ಜಿಲ್ಲಾಧಿಕಾರಿಗಳಿಗೆ ಇಂದು ಇಲ್ಲಿ ಕಟ್ಟುನಿಟ್ಟಾಗಿ ಸೂಚಿಸಿದರು.

‘ಗ್ರಾಮೀಣ ಜನರ ಎಷ್ಟೋ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಲು ನೆರವಾಗುವ ಈ ಜನಸಂಪರ್ಕ ಸಭೆಯಲ್ಲಿ ತಹಶೀಲ್ದಾರ್‌, ರೆವಿನ್ಯೂ ಇನ್‌ಸ್ಪೆಕ್ಟರ್‌, ಗ್ರಾಮ ಲೆಕ್ಕಿಗ ಎಲ್ಲರೂ ಭಾಗವಹಿಸಬೇಕು. ಸಭೆಯ ಕಲಾಪಗಳ ಬಗ್ಗೆ ಜಿಲ್ಲಾಧಿಕಾರಿಗಳು, ರಾಜ್ಯದ ಮುಖ್ಯ ಕಾರ್ಯದರ್ಶಿಯವರಿಗೆ ವರದಿ ಕಳುಹಿಸಿಕೊಡಬೇಕು’ ಎಂದು ಅವರು ಸಲಹೆ ಮಾಡಿದರು.

ADVERTISEMENT

ಗುರುತು ಚೀಟಿ ಇಲ್ಲದೆ ಬಿಹಾರ ಚುನಾವಣೆ: ಸುಪ್ರೀಂ ಕೋರ್ಟ್‌ಗೆ ಶೇಷನ್ ಭರವಸೆ

ನವದೆಹಲಿ, ಜ. 16 (ಪಿಟಿಐ): ‘ಬಿಹಾರದಲ್ಲಿ ಮತದಾರರಿಗೆ ಭಾವಚಿತ್ರ ಸಹಿತ ಗುರುತಿನ ಚೀಟಿ ನೀಡದಿದ್ದರೆ ಮುಂದಿನ ತಿಂಗಳು ವಿಧಾನಸಭೆ ಚುನಾವಣೆ ನಡೆಸುವುದಿಲ್ಲ’ ಎಂಬ ನಿಲುವನ್ನು ಮುಖ್ಯ ಚುನಾವಣೆ ಕಮೀಷನರ್ ಟಿ.ಎನ್. ಶೇಷನ್ ಇಂದು ಸುಪ್ರೀಂ ಕೋರ್ಟಿನ ಮುಂದೆ ಬದಲಿಸಿದ್ದಾರೆ.

ಸೆಪ್ಟೆಂಬರ್ 30ರೊಳಗೆ ಎಲ್ಲ ಮತದಾರರಿಗೆ ಗುರುತಿನ ಚೀಟಿ ನೀಡುವುದಾಗಿ ರಾಜ್ಯ ಸರ್ಕಾರ ವಾಗ್ದಾನ ಮಾಡಿದರೆ ಅಲ್ಲಿ ಚುನಾವಣೆ ನಡೆಸಲು ಅವರು ಒಪ್ಪಿದ್ದಾರೆ. ಈ ಮಧ್ಯೆ, ಬಿಹಾರ ರಾಜ್ಯಪಾಲರು ಇಂದು ಅಧಿಸೂಚನೆ ಹೊರಡಿಸಿ ಚುನಾವಣೆ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.