ADVERTISEMENT

25 ವರ್ಷಗಳ ಹಿಂದೆ | ಸೋಮವಾರ, 5–6–1995

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 20:00 IST
Last Updated 4 ಜೂನ್ 2020, 20:00 IST

ಸಾಹಿತ್ಯ ವಿಮರ್ಶಕ್ಕೆ ‘ಹಂ ಆಪ್‌ಕೆ...’ ಸವಾಲು!
ಮುಧೋಳ, ಜೂನ್‌ 4–
ಕನ್ನಡ ಸಾಹಿತ್ಯ ವಿಮರ್ಶೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕನ್ನಡದ ವಿಮರ್ಶಕರು ಇಂದು ಮುಧೋಳದಲ್ಲಿ ಹೊಸ ಸವಾಲನ್ನು ಎದುರಿಸಿದರು. ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ, ‘ಪ್ರಸ್ತುತ ವಿಮರ್ಶೆಯ ಸಂದಿಗ್ಧಗಳು ಹಾಗೂ ಸವಾಲುಗಳು’ ಎಂಬ ಸಾಹಿತ್ಯ ಸಂವಾದ ಗೋಷ್ಠಿಯನ್ನು ಮುಧೋಳದ ಸಿನಿಮಾ ಥಿಯೇಟರ್‌ ಒಂದರಲ್ಲಿ ಏರ್ಪಡಿಸಲಾಗಿತ್ತು.

ಡಾ. ಸಿ.ಎನ್‌.ರಾಮಚಂದ್ರನ್‌ ಅಧ್ಯಕ್ಷತೆ ವಹಿಸಿ, ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಆಶಯಭಾಷಣ ಮಾಡಿದ ಈ ಸಾಹಿತ್ಯ ಸಂವಾದ ಗೋಷ್ಠಿಯಲ್ಲಿ ಕೆ.ಜಿ.ನಾಗರಾಜಪ್ಪ, ಡಾ. ವಿಜಯಾ ದಬ್ಬೆ, ಕುಂ.ವೀರಭದ್ರಪ್ಪ, ಡಾ. ಎಲ್‌.ಹನುಮಂತಯ್ಯ ಮತ್ತು ಪ್ರೊ. ಪಿ.ವಿ.ವಜ್ರಮಟ್ಟಿ ಭಾಗವಹಿಸಿದ್ದರು.

ತಮಾಷೆಯ ವಿಷಯವೆಂದರೆ, ಕನ್ನಡ ಸಾಹಿತ್ಯ ಪರಿಷತ್ತು ಈ ಎಲ್ಲಾ ವಿಮರ್ಶಕರಿಗೆ ತಲಾ 6 ನಿಮಿಷ ಮಾತ್ರ ಮಾತಾಡುವಂತೆ ನಿರ್ಬಂಧ ವಿಧಿಸಿತು. 10 ಗಂಟೆಗೆ ಆರಂಭವಾದ ಗೋಷ್ಠಿ 11 ಗಂಟೆಗೆ ಮುಗಿಯಲೇಬೇಕಾಗಿತ್ತು. ಯಾಕೆಂದರೆ 11 ಗಂಟೆಗೆ ಥಿಯೇಟರ್‌ನಲ್ಲಿ ‘ಹಂ ಆಪ್‌ಕೆ ಹೈ ಕೌನ್‌’ ಸಿನಿಮಾ ಪ್ರದರ್ಶನ ನಡೆಯಬೇಕಿತ್ತು. ಸವಾಲನ್ನು ಎದುರಿಸಿದ ವಿಮರ್ಶಕರು ಚಕಚಕನೆ ಅರ್ಧಂಬರ್ಧ ಟಿಪ್ಪಣಿಯನ್ನು ಅವಸರದಲ್ಲೇ ಹೇಳಿ ಮುಗಿಸಿದರು. ಪ್ರತಿಯೊಬ್ಬರು ಭಾಷಣ ಮಾಡುವಾಗಲೂ 6 ನಿಮಿಷ ಆದ ತಕ್ಷಣ ಹಿಂದಿನಿಂದ ಅಂಗಿಯ ಚುಂಗನ್ನು ಜಗ್ಗಿಸುವ ಕೆಲಸ ಅಧ್ಯಕ್ಷರದ್ದಾಯಿತು.

ADVERTISEMENT

ಪ್ರಭಾಕರನ್‌ ವಶಕ್ಕೆ ಕೋರಿಕೆ, ಶ್ರೀಲಂಕಾಗೆ ‘ದಿಗ್ಭ್ರಮೆ’
ಕೊಲಂಬೊ, ಜೂನ್‌ 4 (ಯುಎನ್‌ಐ, ಪಿಟಿಐ)–
ಎಲ್‌ಟಿಟಿಇ ಧುರೀಣ ವಿ.ಪ್ರಭಾಕರನ್‌ ಅವರನ್ನು ಬಂಧಿಸಿ ತನ್ನ ವಶಕ್ಕೆ ಒಪ್ಪಿಸಲು ಭಾರತ ಸರ್ಕಾರ ಹಠಾತ್ತನೆ ಕೇಳಿಕೊಂಡಿರುವುದಕ್ಕೆ ಶ್ರೀಲಂಕಾ ಸರ್ಕಾರಿ ವಲಯದಲ್ಲಿ ದಿಗ್ಭ್ರಮೆ ವ್ಯಕ್ತಪಟ್ಟಿದ್ದರೂ ಇಲ್ಲಿನ ನಾಗರಿಕರಲ್ಲಿ ಈ ಸುದ್ದಿಯಿಂದಾಗಿ ಒಂದು ರೀತಿಯ ನೆಮ್ಮದಿ ಮೂಡಿದೆ.

ಭಾರತದ ಈ ಕೋರಿಕೆ ಶ್ರೀಲಂಕಾ ವಿದೇಶಾಂಗ ಖಾತೆಯನ್ನು ಅಚ್ಚರಿಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.