ADVERTISEMENT

25 ವರ್ಷಗಳ ಹಿಂದೆ | ಶನಿವಾರ, 1–7–1995

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 19:30 IST
Last Updated 30 ಜೂನ್ 2020, 19:30 IST

ಟಿಸಿಎಚ್‌, ಬಿಇಡಿ ಪ್ರವೇಶಕ್ಕೆ ಸಿಇಟಿ ಮಾದರಿಯ ಪರೀಕ್ಷೆ
ಬೆಂಗಳೂರು, ಜೂನ್‌ 30–
ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿಯಿರುವ 18,700 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಮತ್ತು ಬಿಇಡಿ ಕಾಲೇಜುಗಳು ಮತ್ತು ಟಿಸಿಎಚ್‌ ಸಂಸ್ಥೆಗಳನ್ನು ವೃತ್ತಿಪರ ಶಿಕ್ಷಣ ಪ್ರವೇಶ ನೀತಿ ವ್ಯಾಪ್ತಿಗೆ ತರುವ ಪ್ರಮುಖ ನಿರ್ಧಾರಗಳನ್ನು ಸರ್ಕಾರ ಇಂದು ತೆಗೆದುಕೊಂಡಿದೆ.

‘ಕನ್ನಡ ಮಾಧ್ಯಮಕ್ಕೆ ಸರ್ಕಾರ, ನ್ಯಾಯಾಲಯ ಅಡ್ಡಿ’
ಬೆಂಗಳೂರು, ಜೂನ್‌ 30–
ಮಾತೃಭಾಷಾ ಮಾಧ್ಯಮ ಶಿಕ್ಷಣ ನೀತಿಯ ಅನುಷ್ಠಾನ, ವಂತಿಗೆ ಹಾವಳಿಗೆ ತಡೆ ಮತ್ತು ಸಂಸ್ಕೃತ ಭಾಷಾ ಪಠ್ಯಕ್ರಮದ ಮಟ್ಟ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಶಕ್ತಿ ಕೇಂದ್ರದ ಆಶ್ರಯದಲ್ಲಿ ನಡೆದ ಚಿಂತನ ಗೋಷ್ಠಿಯಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಇಂದು ಸರ್ಕಾರವನ್ನು ಒತ್ತಾಯಿಸಿದರು.

ಒಂದರಿಂದ ನಾಲ್ಕನೇ ತರಗತಿವರೆಗೆ ಮಾತೃಭಾಷೆ ಅಥವಾ ಪರಿಸರದ ಭಾಷೆಯಲ್ಲಿ ಶಿಕ್ಷಣ ನೀಡಬೇಕು ಎಂಬ ಸರ್ಕಾರದ ಆದೇಶ ಜಾರಿಯಾಗದೆ ಮೂಲೆಗುಂಪಾಗಿದೆ. ಎಸ್‌ಎಸ್‌ಎಲ್‌ಸಿ ರ‍್ಯಾಂಕುಗಳೆಲ್ಲಾ ಸಂಸ್ಕೃತ ಭಾಷಾ ವಿದ್ಯಾರ್ಥಿಗಳ ಪಾಲಾಗುತ್ತಿವೆ, ವಂತಿಗೆ ಹಗಲುದರೋಡೆ ಆಗಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಈಗಲಾದರೂ ಈ ನಿಟ್ಟಿನಲ್ಲಿ ತ್ವರಿತ ಪರಿಹಾರ ರೂಪಿಸಬೇಕು ಎಂದು ಕೇಳಿಕೊಂಡರು.

ADVERTISEMENT

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಗೋಷ್ಠಿಯಲ್ಲಿ ವಕೀಲ ಸಿ.ಎಚ್‌.ಹನುಮಂತರಾಯ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಕೆ.ಎನ್‌.ಸುಬ್ಬಾರೆಡ್ಡಿ, ಶಿಕ್ಷಣ ಇಲಾಖೆಯ ನಿವೃತ್ತ ಹಿರಿಯ ಅಧಿಕಾರಿ ಕೆ.ಶಾಂತಯ್ಯ ಪ್ರಬಂಧ ಮಂಡಿಸಿದರು.

ತಜ್ಞರು, ಶಿಕ್ಷಕರು, ಬರಹಗಾರರು ಅನೇಕರು ಭಾಗವಹಿಸಿ ಸಲಹೆ– ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.