ADVERTISEMENT

ಬುಧವಾರ, 16–3–1994

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2019, 20:05 IST
Last Updated 15 ಮಾರ್ಚ್ 2019, 20:05 IST

ಹಿರಿಯ ಲೇಖಕಿ ಎಂ.ಕೆ. ಇಂದಿರಾ ಇನ್ನಿಲ್ಲ
ಬೆಂಗಳೂರು, ಮಾ. 15– ಸಂಪ್ರದಾಯದ ಚೌಕಟ್ಟಿನೊಳಗೇ ಸಮಷ್ಟಿ ಬದುಕಿನ ವೈರುಧ್ಯ, ಚೆಲುವು, ಸ್ಥಿತ್ಯಂತರಗಳನ್ನು ಹಿಡಿದಿಟ್ಟು ಜೀವನಾನುಭವವನ್ನು ಸಾಹಿತ್ಯವಾಗಿ ಮಾರ್ಪಡಿಸಿದ ಕನ್ನಡದ ಹಿರಿಯ ಲೇಖಕಿ ಎಂ.ಕೆ. ಇಂದಿರಾ ಅವರು ಇಂದು ಇಲ್ಲಿ ನಿಧನರಾದರು.

ಮಲೆನಾಡಿನ ಮಧುರ ಚಿತ್ರಣ, ಸ್ವಾತಂತ್ರ್ಯ ಪೂರ್ವ ಸಂಪ್ರದಾಯಶರಣ ಸಮಾಜದ ದಟ್ಟ ವಿವರಗಳುಳ್ಳ ಕಾದಂಬರಿಗಳಿಂದಾಗಿ ಕನ್ನಡದ ಅತ್ಯಂತ ಜನಪ್ರಿಯ ಲೇಖಕಿಯಾಗಿದ್ದ ಇಂದಿರಾ ಅವರಿಗೆ 77 ವರ್ಷ ವಯಸ್ಸಾಗಿತ್ತು. ಮೂವರು ಪುತ್ರರು ಮತ್ತು ಪುತ್ರಿಯನ್ನು ಅವರು ಅಗಲಿದ್ದಾರೆ.

ಕಳೆದ ಕೆಲ ದಿನಗಳಿಂದ ಅಸ್ವಸ್ಥರಾಗಿದ್ದ ಅವರು ಬಸವೇಶ್ವರನಗರದ ತಮ್ಮ ಮಗನ ಮನೆಯಲ್ಲಿ ಇಂದು ಮಧ್ಯಾಹ್ನ ಕೊನೆಯುಸಿರೆಳೆದರು. ವಿಷಯ ತಿಳಿದ ಹಲವು ಅಭಿಮಾನಿಗಳು, ಆಪ್ತರು ಅವರ ಮನೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ನಾಳೆ ಬೆಳಿಗ್ಗೆ 11ಕ್ಕೆ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಲಿದೆ.

ADVERTISEMENT

ಕನ್ನಡ ಮಹಿಳಾ ಸಾಹಿತ್ಯ ಲೋಕದ ಹಿರಿಯಕ್ಕನಾಗಿ, ನವ್ಯಕಾವ್ಯ ಚಳವಳಿ ಉತ್ತುಂಗದಲ್ಲಿದ್ದಾಗ ಪರ್ಯಾಯವಾಗಿ ತಮ್ಮ ಮನಮುಟ್ಟುವ ಕಾದಂಬರಿಗಳ ಮೂಲಕ ದೊಡ್ಡ ಓದುಗರ ಬಳಗವನ್ನು ಸೃಷ್ಟಿಸಿಕೊಂಡ ಸಾಧನೆ ಇಂದಿರಾ ಅವರದು.

ನಿಗಮ–ಮಂಡಲಿ ಅಧ್ಯಕ್ಷರ ರಾಜೀನಾಮೆ ಕೋರಿಕೆ
ಬೆಂಗಳೂರು, ಮಾ. 15– ಮಂತ್ರಿ ಮಂಡಲ ಹಾಗೂ ವಿವಿಧ ನಿಗಮ ಮಂಡಲಿಗಳ ಪುನರ್ರಚನೆ ಹಿನ್ನೆಲೆಯ ಪೂರ್ವಭಾವಿ ಕಸರತ್ತಾಗಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರು ನಿಗಮ– ಮಂಡಲಿಗಳ ಅಧ್ಯಕ್ಷರ ರಾಜೀನಾಮೆ ಕೇಳಿದ್ದಾರೆ.

‌ಕಾಮರಾಜ್ ಸೂತ್ರದಂತೆ ಎಲ್ಲ ಸಚಿವರ ರಾಜೀನಾಮೆ ಪಡೆದು ಮಂತ್ರಿಮಂಡಲ ಪುನರ್ರಚಿಸಬೇಕು ಎಂದು ಹೈಕಮಾಂಡ್ ನಿರ್ದೇಶನ ನೀಡಿದ್ದು, ಮಾಸಾಂತ್ಯದಲ್ಲಿ ಅಥವಾ ಬಜೆಟ್ ಅಧಿವೇಶನದ ನಂತರ ಇದು ಕೃತಿಗಿಳಿಯುವ ಸಾಧ್ಯತೆಯಿದೆ ಎನ್ನಲಾಗಿದೆ.

ಬಿನ್ನಿ ಮಿಲ್ ಪುನರಾರಂಭಕ್ಕೆ ಶೀಘ್ರ ರೂಪ
ಬೆಂಗಳೂರು, ಮಾ. 15– ಒಂದು ಶತಮಾನದಷ್ಟು ಇತಿಹಾಸವಿರುವ ನಗರದ ಬಿನ್ನಿ ಮಿಲ್ ಮುಂದಿನ ತಿಂಗಳು ಪುನಃ ಪ್ರಾರಂಭ ಆಗುವ ಸೂಚನೆಗಳಿದ್ದು ತಿಂಗಳ ಮೊದಲ ವಾರದಲ್ಲಿ ಇದಕ್ಕೆ ಸ್ಪಷ್ಟ ರೂಪ ಸಿಗಲಿದೆ.

ದೆಹಲಿಯಲ್ಲಿ ಈ ತಿಂಗಳ 30ರಂದು ಕೈಗಾರಿಕಾ ಹಣಕಾಸು ಹಾಗೂ ಸುಧಾರಣಾ ಮಂಡಳಿ (ಬಿಐಎಫ್‌ಆರ್)ಯು ಕಾರ್ಖಾನೆಗೆ ಸಾಲ ಸೌಲಭ್ಯ ನೀಡುವ ಹಣಕಾಸು ಸಂಸ್ಥೆಗಳು ಸೇರಿದಂತೆ, ಕಾರ್ಖಾನೆಯ ಆಡಳಿತ ಮಂಡಳಿ, ಕಾರ್ಮಿಕ ಮುಖಂಡರ ಸಭೆಯನ್ನು ಕರೆದಿದೆ.

ಈ ಸಭೆಯ ನಂತರ ಮಂಡಳಿಯು ಕೈಗೊಳ್ಳುವ ನಿರ್ಧಾರವನ್ನು ಕಾರ್ಖಾನೆಯ ಆಡಳಿತ ಮಂಡಳಿ ಹಾಗೂ ಕಾರ್ಮಿಕ ಮುಖಂಡರು ಒಟ್ಟಿಗೆ ಸಭೆ ನಡೆಸಿ, ಕಾರ್ಖಾನೆಯನ್ನು ಪುನರಾರಂಭಿಸುವ ದಿನವನ್ನು ಗೊತ್ತುಪಡಿಸುವರು ಎಂದು ಅಧಿಕೃತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.