ADVERTISEMENT

ಗುರುವಾರ, ಜುಲೈ 14, 1994

​ಪ್ರಜಾವಾಣಿ ವಾರ್ತೆ
Published 13 ಜುಲೈ 2019, 19:25 IST
Last Updated 13 ಜುಲೈ 2019, 19:25 IST

ತೆಲುಗುಗಂಗಾ ಹಗರಣ: ಸದನದಲ್ಲಿ ಕೋಲಾಹಲ; ತೆಲುಗುದೇಶಂನ ಎಲ್ಲ 56 ಶಾಸಕರು ಅಮಾನತು
ಹೈದರಾಬಾದ್‌,ಜುಲೈ13(ಯುಎನ್‌ಐ)– ಆಂಧ್ರಪ್ರದೇಶ ವಿಧಾನಸಭೆಯ ಕಾರ್ಯಕಲಾಪಕ್ಕೆ ಇಂದು ಅಡ್ಡಿಯುಂಟು ಮಾಡಿದ ತೆಲುಗುದೇಶಂ ಪಕ್ಷದ ಎಲ್ಲ 56 ಶಾಸಕರು ಹಾಗೂ ಮೂವರು ಸ್ವತಂತ್ರ ಶಾಸಕರನ್ನು ಮುಂಗಾರು ಅಧಿವೇಶನದಲ್ಲಿ ಭಾಗವಹಿಸದಂತೆ ಸಸ್ಪೆಂಡ್‌ ಮಾಡಲಾಯಿತು.

ತೆಲುಗು ಗಂಗಾ ಯೋಜನೆಯಲ್ಲಿ ಕೆಲವು ಗುತ್ತಿಗೆದಾರರ ಟೆಂಡರ್‌ ಅನ್ನು ಇನ್ನೊಂದು ಗುತ್ತಿಗೆದಾರರ ಗುಂಪು ಬಂದೂಕು ತೋರಿಸಿ, ಬೆದರಿಸಿ ಕಸಿದುಕೊಂಡಿದೆ ಎಂಬ ವಿರೋಧ ಪಕ್ಷದವರ ಆರೋಪದ ಬಗ್ಗೆ ಹಣಕಾಸು ಸಚಿವ ರೋಸಯ್ಯ ಸ್ಪಷ್ಟನೆ ನೀಡಿದರು.

ಭಾರೀ ಮಳೆ: ಅನೇಕ ಜಲಾಶಯ ಭರ್ತಿ
ಬೆಂಗಳೂರು,ಜುಲೈ13– ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಕಾವೇರಿ, ನೇತ್ರಾವತಿ, ಕಪಿಲಾ, ಹೇಮಾವತಿ, ತುಂಗಾ, ಹಾರಂಗಿ,ವರದಾ,ಅಘನಾಶಿನಿ ಮತ್ತು ಗುಂಡಬಾಳ ನದಿಗಳು ತುಂಬಿ ಹರಿಯುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅವ್ಯಾಹತವಾಗಿರುವ ಮಳೆ ಮತ್ತು ಬಿರುಗಾಳಿಗೆ ಸಿಕ್ಕಿ ಸತ್ತವರ ಸಂಖ್ಯೆ ಏಳಕ್ಕೆ ಏರಿದೆ.

ADVERTISEMENT

ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ರಾಜ್ಯದ ಪ್ರಮುಖ ಜಲಾಶಯಗಳಿಗೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿವೆ. ಕೃಷ್ಣರಾಜ ಸಾಗರ, ಕಬಿನಿ, ಹಾರಂಗಿ, ಹೇಮಾವತಿ ಜಲಾಶಯಗಳು ಹಾಗೂ ತುಂಬೆ ವೆಂಟೆಡ್‌ ಡ್ಯಾಂ ಗರಿಷ್ಠ ಮಟ್ಟ ತಲುಪುವ ಹಂತದಲ್ಲಿವೆ.

ರಾಜ್ಯದಲ್ಲಿ ದಾವೂದ್‌ ಆಸ್ತಿ ಪತ್ತೆ
ಬೆಂಗಳೂರು,ಜಲೈ13– ಭೂಗತ ಜಗತ್ತಿನ ದೊರೆ ದಾವೂದ್‌ ಇಬ್ರಾಹಿಂ ಬೆಂಗಳೂರಿನಲ್ಲಿ ಬೇನಾಮಿ ಹೆಸರಿನಲ್ಲಿ ಖರೀದಿಸಿರುವ ಆಸ್ತಿಯನ್ನು ಸಿಬಿಐ ಪತ್ತೆಹಚ್ಚಿದೆ ಎಂದು ವಿಶ್ವಸನೀಯವಾಗಿ ತಿಳಿದು ಬಂದಿದೆ.

ಬೆಂಗಳೂರಿಗೆ ಬಂದು ಒಂದು ವಾರ ತಂಗಿದ್ದ ಸಿಬಿಐ ಅಧಿಕಾರಿಗಳ ತಂಡ ಬ್ರಿಗೇಡ್‌ ರಸ್ತೆ, ಚರ್ಚ್‌ ಸ್ಟ್ರೀಟ್‌, ರಾಬರ್ಟ್‌ಸನ್‌ ರಸ್ತೆ, ಫ್ರೇಜರ್‌ಟೌನ್‌, ಶಿವಾಜಿನಗರ ಮೊದಲಾದ ಸ್ಥಳಗಳಲ್ಲಿ ಬೇನಾಮಿ ಹೆಸರಿನಲ್ಲಿ ದಾವೂದ್‌ ಖರೀದಿಸಿರುವ ಆಸ್ತಿಯ ಪತ್ತೆ ಕಾರ್ಯದಲ್ಲಿ ತೊಡಗಿತ್ತು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.