ADVERTISEMENT

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಶನಿವಾರ, 3–1–1998

​ಪ್ರಜಾವಾಣಿ ವಾರ್ತೆ
Published 2 ಜನವರಿ 2023, 19:45 IST
Last Updated 2 ಜನವರಿ 2023, 19:45 IST
   

ಸರ್ಕಾರಿ ನೌಕರರ ಮುಷ್ಕರ ರಾಜ್ಯದಾದ್ಯಂತ ಯಶಸ್ವಿ

ಬೆಂಗಳೂರು, ಜ.2–ಕೇಂದ್ರ ಸರ್ಕಾರದ ಐದನೇ ವೇತನ ಆಯೋಗದ ಶಿಫಾರಸುಗಳನ್ನು ತಮಗೂ ಅನ್ವಯಿಸಬೇಕೆಂಬ ಬೇಡಿಕೆ ಮುಂದಿಟ್ಟು ರಾಜ್ಯ ಸರ್ಕಾರಿ ನೌಕರರು ಇಂದು ಆರಂಭಿಸಿರುವ ಅನಿರ್ದಿಷ್ಟ ಅವಧಿಯ ಮುಷ್ಕರವು ರಾಜ್ಯದಾದ್ಯಂತ ಸಂಪೂರ್ಣ ಯಶಸ್ವಿಯಾಗಿದೆ.

ನೌಕರರ ಮುಷ್ಕರದಿಂದಾಗಿ ಬೆಂಗಳೂರು, ಮಂಗಳೂರು, ಮೈಸೂರು ಮತ್ತು ಬೆಳಗಾವಿ ನಗರಗಳೂ ಸೇರಿದಂತೆ ರಾಜ್ಯದ ಯಾವುದೇ ಭಾಗದಲ್ಲಿ ಸರ್ಕಾರಿ ಕಚೇರಿಗಳ ಬಾಗಿಲು ಇಂದು ತೆಗೆದಿರಲಿಲ್ಲ. ಇದರಿಂದಾಗಿ ಆಡಳಿತ ಯಂತ್ರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.

ADVERTISEMENT

ಮುಷ್ಕರ ಶಾಂತಿಯುತವಾಗಿ ನಡೆದಿದ್ದು, ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ. ಮುಷ್ಕರ ನಾಳೆಯೂ ಮುಂದುವರಿಯಲಿದೆ.

ಹಣಕಾಸು ಕಂಪನಿಗಳಿಗೆ
ಆರ್‌ಬಿಐ ಅಂಕುಶ

ಮುಂಬೈ, ಜ.2 (ಪಿಟಿಐ): ರಿಸರ್ವ್‌ ಬ್ಯಾಂಕ್‌ ಇಂದು ಬ್ಯಾಂಕಿಂಗೇತರ ಹಣಕಾಸು ಕಂಪನಿ (ಎನ್‌ಬಿಎಫ್‌ಸಿ)ಗಳ ಮೇಲೆ ಕಟ್ಟುನಿಟ್ಟಿನ ಹಾಗೂ ಕಠಿಣ ನಿರ್ಬಂಧಗಳನ್ನು ಹೇರಿದ್ದು, ಅವುಗಳು ಠೇವಣಿಗಳಿಗೆ ಕೊಡಬಹುದಾದ ಬಡ್ಡಿದರವನ್ನು ಗರಿಷ್ಠ ಶೇಕಡ 16ಕ್ಕೆ ಮಿತಿಗೊಳಿಸಿದೆ.

ಸ್ವಂತ ನಿವ್ವಳ ಹಣಕಾಸು 25 ಲಕ್ಷ ರೂಪಾಯಿಗಳಿಗಿಂತ ಕಡಿಮೆಯಿರುವ ಹಾಗೂ ರೇಟಿಂಗ್‌ ಸಂಸ್ಥೆಗಳಿಂದ ’ಎ’ ದರ್ಜೆಗಿಂತ ಕೆಳಗಿನ ಅರ್ಹತೆಯನ್ನು ಪಡೆದ ಹಣಕಾಸು ಸಂಸ್ಥೆಗಳು ಸಾರ್ವಜನಿಕರಿಂದ ಠೇವಣಿ ಸ್ವೀಕರಿಸದೇ ಇರುವಂತೆ ನಿರ್ಬಂಧ ಹೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.