ADVERTISEMENT

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಶುಕ್ರವಾರ, ಜನವರಿ 2, 1998

​ಪ್ರಜಾವಾಣಿ ವಾರ್ತೆ
Published 1 ಜನವರಿ 2023, 19:45 IST
Last Updated 1 ಜನವರಿ 2023, 19:45 IST
ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಶುಕ್ರವಾರ, ಜನವರಿ 2, 1998
ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಶುಕ್ರವಾರ, ಜನವರಿ 2, 1998   

ಫೆ.16ರಿಂದ ನಾಲ್ಕು ಹಂತದಲ್ಲಿ ಲೋಕಸಭೆ ಚುನಾವಣೆ

ನವದೆಹಲಿ, ಜ.1– ಲೋಕಸಭೆಯ ಚುನಾವಣೆ ದಿನಾಂಕಗಳನ್ನು ಚುನಾವಣೆ ಆಯೋಗ ಇಂದು ಪ್ರಕಟಿಸಿದ್ದು ಫೆ. 16, 22, 28 ಮತ್ತು ಮಾರ್ಚ್‌ 7ರಂದು ನಾಲ್ಕು ಹಂತದಲ್ಲಿ ಮತದಾನ ನಡೆಯಲಿದೆ. ಕರ್ನಾಟಕದ 28 ಲೋಕಸಭಾ ಸ್ಥಾನಗಳಿಗೆ ಎರಡು ಹಂತದಲ್ಲಿ ಚುನಾವಣೆ ಏರ್ಪಾಡಾಗಿದೆ. ಫೆ.16 ಮತ್ತು 22ರಂದು ಮತದಾನ ನಡೆಯುವುದು.

ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ 5 ರಾಜ್ಯಗಳ ವಿಧಾನಸಭೆಗಳಿಗೂ ಇದೇ ಸಮಯದಲ್ಲಿ ಚುನಾವಣೆ ನಡೆಯುವುದು. ಕರ್ನಾಟಕದ ಆನೇಕಲ್‌ ಮತ್ತು ಧಾರವಾಡ ಗ್ರಾಮಾಂತರ ಕ್ಷೇತ್ರದ ವಿಧಾನಸಭೆ ಉಪಚುನಾವಣೆ ಕೂಡಾ ಇದೇ ಸಮಯದಲ್ಲಿ ನಡೆಯುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.

ADVERTISEMENT

ಚುನಾವಣಾ ಅಧಿಸೂಚನೆಯನ್ನು ಜ. 20, 21, 28 ಮತ್ತು ಫೆ. 10ರಂದು ಪ್ರಕಟಿಸಲಾಗುವುದು. ಜಮ್ಮು ಮತ್ತು ಕಾಶ್ಮೀರ ಹಾಗೂ ಮೇಘಾಲಯದ 8 ಲೋಕಸಭಾ ಕ್ಷೇತ್ರಗಳನ್ನು ಬಿಟ್ಟು ದೇಶದ ಇತರ ಎಲ್ಲೆಡೆ ಮಾರ್ಚ್‌ 8ರಂದು ಮತ ಎಣಿಕೆ ಆರಂಭವಾಗುವುದು. ಚುನಾವಣಾ ಪ್ರಕ್ರಿಯೆ ಮಾರ್ಚ್‌ 12ರಂದು ಪೂರ್ಣಗೊಳ್ಳಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಡಾ. ಎಂ.ಎಸ್‌.ಗಿಲ್‌ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸೋನಿಯಾ ಪ್ರವೇಶ: ರಂಗದ ನಿಲುವಿನಲ್ಲಿ ಭಿನ್ನಾಭಿಪ್ರಾಯ

ನವದೆಹಲಿ, ಜ. 1– ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಪರವಾಗಿ ಪ್ರಚಾರ ಮಾಡಲು ಸೋನಿಯಾ ಗಾಂಧಿ ಅವರು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ವಿರುದ್ಧ ತಾಳಬೇಕಾದ ನಿಲುವಿನಲ್ಲಿ ಸಂಯುಕ್ತ ರಂಗದಲ್ಲಿ ಭಿನ್ನಾಭಿಪ್ರಾಯ ಮೂಡಿದೆ.

ಚುನಾವಣಾ ತಂತ್ರ ಕುರಿತಂತೆ ಚರ್ಚಿಸಲು ನವದೆಹಲಿಯಲ್ಲಿ ನಿನ್ನೆ ನಡೆದ ಸಂಯುಕ್ತ ರಂಗದ ಪ್ರಮುಖರ ಸಭೆಯಲ್ಲಿ ಪ್ರಧಾನಿ ಐ.ಕೆ. ಗುಜ್ರಾಲ್‌, ಸಂಯುಕ್ತ ರಂಗದ ಸಂಚಾಲಕ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಹಾಗೂ ಎಡಪಕ್ಷಗಳ ನಾಯಕರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.