ADVERTISEMENT

25 ವರ್ಷಗಳ ಹಿಂದೆ: ಶುಕ್ರವಾರ 29.5.1998

​ಪ್ರಜಾವಾಣಿ ವಾರ್ತೆ
Published 28 ಮೇ 2023, 22:25 IST
Last Updated 28 ಮೇ 2023, 22:25 IST
ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ
ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ   

ಪಾಕಿಸ್ತಾನದಿಂದಲೂ ಐದು ಅಣ್ವಸ್ತ್ರ ಸಾಧನ ಸ್ಫೋಟ

ಇಸ್ಲಾಮಾಬಾದ್, ಮೇ 28 (ಎಪಿ)– ಪೊಖ್ರಾನ್ ಅಣ್ವಸ್ತ್ರ ಸಾಧನ ಪರೀಕ್ಷೆಗೆ ಪ್ರತೀಕಾರವಾಗಿ ಪಾಕಿಸ್ತಾನ ಇಂದು ಐದು ಅಣ್ವಸ್ತ್ರ ಸಾಧನಗಳ ಪರೀಕ್ಷೆ ನಡೆಸುವ ಮೂಲಕ ದಕ್ಷಿಣ ಏಷ್ಯಾದಲ್ಲಿ ತೀವ್ರ ಶಸ್ತ್ರಾಸ್ತ್ರ ಪೈಪೋಟಿಗೆ ನಾಂದಿ ಹಾಡಿದೆ.

ಇಂದು ಸಂಜೆ ನಾಲ್ಕು ಗಂಟೆಗೆ ದಕ್ಷಿಣ ಬಲೂಚಿಸ್ತಾನ ಪ್ರದೇಶದ ಚಗೈ ಗುಡ್ಡಗಾಡು ಪ್ರದೇಶದಲ್ಲಿ ಈ ಪರೀಕ್ಷಾರ್ಥ ಪ್ರಯೋಗ ನಡೆಸಿತು ಎಂದು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರು ಪಾಕಿಸ್ತಾನ ಟೆಲಿವಿಷನ್‌ನ ರಾಷ್ಟ್ರೀಯ ಜಾಲದಲ್ಲಿ ಘೋಷಿಸಿದರು. ಇಂದಿನ ಸ್ಫೋಟದೊಂದಿಗೆ ಪಾಕಿಸ್ತಾನ ಅಣ್ವಸ್ತ್ರ ಸಾಮರ್ಥ್ಯದಲ್ಲಿ ಭಾರತವನ್ನು ಸರಿಗಟ್ಟಿದೆ ಎಂದು ಅವರು ಹೇಳಿದರು.

ADVERTISEMENT

ಪರಿಸ್ಥಿತಿ ಎದುರಿಸಲು ಭಾರತ ಸಿದ್ಧ: ಪ್ರಧಾನಿ ವಾಜಪೇಯಿ

ನವದೆಹಲಿ, ಮೇ 28 (ಯುಎನ್ಐ)– ಪಾಕಿಸ್ತಾನ ಇಂದು ಐದು ಅಣ್ವಸ್ತ್ರ ಸಾಧನ ಪ್ರಯೋಗ ನಡೆಸಿದ ನಂತರ ‘ಹೊಸ ಪರಿಸ್ಥಿತಿ’ ನಿರ್ಮಾಣವಾಗಿದೆ ಎಂಬುದನ್ನು ಒಪ್ಪಿಕೊಂಡ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು, ಯಾವುದೇ ಸನ್ನಿವೇಶವನ್ನೂ ಎದುರಿಸಲು ಭಾರತ ಸಿದ್ಧವಿದೆ ಎಂದು ತಿಳಿಸಿದರು.

ಪರಿಸ್ಥಿತಿ ಹಿನ್ನೆಲೆಯಲ್ಲಿ ಸಂಸತ್ ಕಲಾಪವನ್ನು ಮುಂದೂಡಿದ ನಂತರ ತುರ್ತು ಸಂಪುಟ ಸಭೆ ನಡೆಸಿದ ಪ್ರಧಾನಿಯವರು, ‘ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಪಾಕಿಸ್ತಾನದ ಅಣ್ವಸ್ತ್ರ ಪರೀಕ್ಷೆ ಅನಿರೀಕ್ಷಿತವಲ್ಲ, ಪರಿಸ್ಥಿತಿ ಎದುರಿಸಲು ನಾವು ಬದ್ಧರಾಗಿಯೇ ಇದ್ದೆವು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.