ADVERTISEMENT

25 ವರ್ಷಗಳ ಹಿಂದೆ: ಭಾನುವಾರ, 03.03.1996

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2021, 19:30 IST
Last Updated 2 ಮಾರ್ಚ್ 2021, 19:30 IST
   

ಕನ್ನಡ ಚಿತ್ರೋದ್ಯಮದ ಬಿಕ್ಕಟ್ಟು ಇತ್ಯರ್ಥ

ಬೆಂಗಳೂರು, ಮಾರ್ಚ್ 2– ಕನ್ನಡ ಚಿತ್ರರಂಗದಲ್ಲಿ ಕಳೆದ ಕೆಲವು ದಿನಗಳಿಂದ ಉಂಟಾಗಿದ್ದ ಬಿಕ್ಕಟ್ಟು, ಚಿತ್ರರಂಗದ ಎಲ್ಲ ಕ್ಷೇತ್ರಗಳ ಪ್ರಮುಖರ ಸರ್ವಸಮ್ಮತ ತೀರ್ಮಾನದಿಂದಾಗಿ ಅಂತ್ಯಗೊಂಡಿದೆ.

ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಎಂ.ಸಿ.ನಾಣಯ್ಯ ಅವರ ಸಮ್ಮುಖದಲ್ಲಿ ನಡೆದ ಚಿತ್ರರಂಗದ ಪ್ರತಿನಿಧಿಗಳ ದೀರ್ಘ ಚರ್ಚೆಯ ಫಲಶ್ರುತಿ ಇದು. ಈ ಹೊಸ ಒಡಂಬಡಿಕೆಯ ಪ್ರಕಾರ, ಈ ವರ್ಷದ ಆಗಸ್ಟ್ 31ರವರೆಗೆ ಏಕಕಾಲಕ್ಕೆ ಪರಭಾಷಾ ಚಿತ್ರಗಳನ್ನು ಬಿಡುಗಡೆ ಮಾಡಬಹುದು. ಆದರೆ ಈ ಅವಧಿಯಲ್ಲಿ ಕನ್ನಡ ಚಿತ್ರಗಳಿಗೆ ಮೊದಲ ಆದ್ಯತೆ ನೀಡಬೇಕು.

ADVERTISEMENT

ಚಿತ್ರಮಂದಿರಗಳ ಬಾಡಿಗೆ ದರಕ್ಕೆ ಸಂಬಂಧಿಸಿದಂತೆ ಸ್ಲ್ಯಾಬ್ ಪೂರ್ವ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಚಿತ್ರಮಂದಿರಗಳ ಪ್ರವೇಶ ದರವನ್ನು ಗರಿಷ್ಠ ರೂ. 20ಕ್ಕಿಂತ ಹೆಚ್ಚು ಮಾಡದಿರಲು ತೀರ್ಮಾನಿಸಲಾಗಿದೆ. ವಿತರಕರು ಚಿತ್ರ ಪ್ರದರ್ಶನದಿಂದ ಸಂಗ್ರಹವಾದ ಹಣವನ್ನು ನಿರ್ಮಾಪಕರಿಗೆ 15 ದಿನದೊಳಗೆ ಪಾವತಿ ಮಾಡಲು ಒಪ್ಪಿಕೊಂಡಿದ್ದಾರೆ.

ನ್ಯಾಯದಾನ ವ್ಯವಸ್ಥೆ ಸರಳೀಕರಣಕ್ಕೆ ಕ್ರಮ

ಬೆಳಗಾವಿ, ಮಾರ್ಚ್ 2– ವಿಳಂಬ ಮತ್ತು ವಿಪರೀತ ವೆಚ್ಚದಿಂದ ಕೂಡಿರುವ ಹಾಲಿ ನ್ಯಾಯದಾನ ವ್ಯವಸ್ಥೆಯಿಂದ ಸಾಮಾನ್ಯ ಜನರು ನ್ಯಾಯಾಂಗ ವ್ಯವಸ್ಥೆಯ ಬಗೆಗೇ ಭ್ರಮನಿರಸನ ಹೊಂದುವಂತೆ ಆಗಿದ್ದು ಶೀಘ್ರವಾಗಿ ಮತ್ತು ಸುಲಭವಾಗಿ ನ್ಯಾಯ ಒದಗಿಸುವ ಪರ್ಯಾಯ ನ್ಯಾಯ ವ್ಯವಸ್ಥೆ ಯನ್ನು ಬಲಪಡಿಸುವ ಅಗತ್ಯವನ್ನು ಪ್ರಧಾನಿ ಪಿ.ವಿ.ನರಸಿಂಹ ರಾವ್ ಒತ್ತಿ ಹೇಳಿದರು.

ಇಲ್ಲಿಗೆ ಸಮೀಪದ ಚಿಕ್ಕೋಡಿ ಪಟ್ಟಣದಲ್ಲಿ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮತ್ತು ವಕೀಲರ ಸಂಘದ 150ನೇ ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪ್ರಧಾನಿಯವರು, ಹಾಲಿ ನ್ಯಾಯದಾನ ವ್ಯವಸ್ಥೆಯಿಂದ ದುರ್ಬಲ ವರ್ಗಗಳು ತೀರಾ ಗಾಸಿಗೊಂಡಿವೆ ಎಂದು ವಿಷಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.