ಉಷ್ಣ ವಿದ್ಯುತ್ ಯೋಜನೆ ಕೈಬಿಟ್ಟ ಕೊಜೆಂಟ್ರಿಕ್ಸ್
ಬೆಂಗಳೂರು, ಜ. 22– ದಕ್ಷಿಣ ಕನ್ನಡ ಜಿಲ್ಲೆಯ ನಂದಿಕೂರು ಬಳಿ ಮಂಗಳೂರು ಪವರ್ ಕಂಪನಿಯು 1.3 ಶತಕೋಟಿ ಡಾಲರ್ ವೆಚ್ಚದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ 1000 ಮೆಗಾವಾಟ್ ಸಾಮರ್ಥ್ಯದ ಶಾಖೋತ್ಪನ್ನ ವಿದ್ಯುತ್ ಯೋಜನೆಯಿಂದ ಹೊರಬರಲು ಅಮೆರಿಕ ಮೂಲದ ಕೊಜೆಂಟ್ರಿಕ್ಸ್ ಸಂಸ್ಥೆಯು ಅಂತಿಮವಾಗಿ ನಿರ್ಧರಿಸಿದೆ.
ಆದರೆ ಭಾರತದ ಪಾಲುದಾರರೊಬ್ಬರ ಜತೆಗೂಡಿ ಉದ್ದೇಶಿತ ಯೋಜನೆಯ ಕಾರ್ಯಗತಕ್ಕೆ, ಮಂಗಳೂರು ಪವರ್ ಕಂಪನಿ ಯಲ್ಲಿ ಶೇ 50ರಷ್ಟು ಬಂಡವಾಳ ಹೊಂದಿರುವ ಹಾಂಗ್‌ಕಾಂಗ್ ಮೂಲದ ಚೈನಾ ಲೈಟ್ ಪವರ್ ಕಂಪನಿ ಮುಂದೆ ಬಂದಿದೆ.
ಬಿಎಂಟಿಸಿ ಬಸ್‌ಗಳ ಚಲನವಲನನಿಗಾಕ್ಕೆ ‘ಜಿಪಿಎಸ್’
ಬೆಂಗಳೂರು, ಜ. 22– ನಗರದ ಬಸ್ ಪ್ರಯಾಣಿಕರ ಅವಕೃಪೆಗೆ ಒಳಗಾಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಪ್ರಯಾಣಿಕರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಕಾಯಕಲ್ಪಕ್ಕೆ ಮುಂದಾಗಿದೆ. ಬಸ್‌ಗಳ ಚಲನವಲನ ಹಾಗೂ ಅವು ಸಂಚರಿಸುತ್ತಿರುವ ಮಾರ್ಗಗಳ ಮೇಲೆ ನಿಗಾ ಇಡಲು ‘ಜಿಪಿಎಸ್’ ವ್ಯವಸ್ಥೆ ಆರಂಭಿಸಿದೆ. ನಗರದಲ್ಲಿ ಕಂಡಕ್ಟರ್‌ರಹಿತ ಬಸ್‌ಗಳನ್ನು ಶೀಘ್ರದಲ್ಲೇ ರಸ್ತೆಗಿಳಿಸಲಿದೆ.
‘ಗ್ಲೋಬಲ್ ಪೊಸಿಷನ್ ಸಿಸ್ಟಮ್ಸ್’ (ಜಿಪಿಎಸ್) ಎಂಬ ವಿನೂತನ ವ್ಯವಸ್ಥೆ ಯಲ್ಲಿ ಬಿಎಂಟಿಸಿಯು ಐದು ಬಸ್‌ಗಳಿಗೆ ಪ್ರಾಯೋಗಿಕವಾಗಿ ಈ ತಿಂಗಳ ಆರಂಭದಿಂದ ‘ಟಾನ್ಸ್‌ಪಾಂಡರ್ಸ್’ ಎಂಬ ಎಲೆಕ್ಟ್ರಾನಿಕ್ ಉಪಕರಣ ಅಳವಡಿಸಿದೆ. ಬಿಎಂಟಿಸಿಯ ಕೇಂದ್ರ ಕಚೇರಿಯಲ್ಲಿರುವ ಡಿಷ್ ಮಾದರಿಯ ಆ್ಯಂಟೆನಾಕ್ಕೆ ಪ್ರತಿ ನಿಮಿಷಕ್ಕೂ ಬಸ್ ಚಲನೆಯ ಮಾರ್ಗದ ಸುಳಿವಿನ ಮಾಹಿತಿಯನ್ನು ಈ ಉಪಕರಣಗಳು ಕಳುಹಿಸಲಿವೆ. ಅಲ್ಲಿಂದ ನೇರವಾಗಿ ಕೇಂದ್ರ ಕಚೇರಿಯಲ್ಲಿರುವ ಕಂಪ್ಯೂಟರ್‌ಗಳ ಪರದೆ ಮೇಲೆ ಬಸ್ ಚಲನೆಯ ಸ್ಥಳ ಅಥವಾ ಮಾರ್ಗವನ್ನು ವೀಕ್ಷಿಸಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.