ರಾಷ್ಟ್ರಹಿತಕ್ಕಾಗಿ ಅಣ್ವಸ್ತ್ರ ನೀತಿಯಲ್ಲಿ ಕಠಿಣ ನಿರ್ಧಾರ: ಪ್ರಧಾನಿ ಘೋಷಣೆ
ನ್ಯೂಯಾರ್ಕ್, ಸೆಪ್ಟೆಂಬರ್ 9 (ಪಿಟಿಐ)– ಭಾರತದ ಹಿತಾಸಕ್ತಿಗೆ ಅವಶ್ಯಕವೆನಿಸಿದರೆ ತಮ್ಮ ಸರ್ಕಾರ ಅಣ್ವಸ್ತ್ರ ಮತ್ತು ವಿದೇಶಿ ನೀತಿಗಳಿಗೆ ಸಂಬಂಧಿಸಿದಂತೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂದು ಪ್ರಧಾನಿ ವಾಜಪೇಯಿ ಸ್ಪಷ್ಟವಾಗಿ ನುಡಿದರು.
ದೇಶದ ಭದ್ರತೆ ದೃಷ್ಟಿಯಿಂದ 1998ರಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದಾಗ ಪ್ರಶ್ನೆಗಳು ಎದ್ದವು; ಆದರೆ ಈಗ ಇಡೀ ಜಗತ್ತು ನಿಜಾಂಶವನ್ನು ಒಪ್ಪಿಕೊಂಡಿದೆ ಎಂದು ಅವರು ತಿಳಿಸಿದರು.
ಪ್ರಧಾನಿ ವಾಜಪೇಯಿ ಅವರು, ತಮ್ಮ ಗೌರವಾರ್ಥ ಭಾರತದ ರಾಯಭಾರಿ ನರೇಶ್ ಚಂದ್ರ ಶುಕ್ರವಾರ ರಾತ್ರಿ ಇಲ್ಲಿ ಏರ್ಪಡಿಸಿದ್ದ ಸತ್ಕಾರಕೂಟದಲ್ಲಿ ಇಲ್ಲಿನ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಹಿಂಸಾಚಾರ: ಪಶ್ಚಿಮ ಬಂಗಾಳಕ್ಕೆ ಎಚ್ಚರಿಕೆ
ನವದೆಹಲಿ, ಸೆಪ್ಟೆಂಬರ್ 9– ಪಶ್ಚಿಮ ಬಂಗಾಳದ ಕೆಲವು ಜಿಲ್ಲೆಗಳಲ್ಲಿ ನಡೆಯುತ್ತಿರುವ ಹಿಂಸಾಚಾರ ಇದೇ ರೀತಿಯಲ್ಲಿ ಮುಂದುವರಿದರೆ ಕಠಿಣ ಕ್ರಮ ಅನಿವಾರ್ಯವಾಗಬಹುದು ಎಂದು ಕೇಂದ್ರ ಸರ್ಕಾರ, ಅಲ್ಲಿನ ರಾಜ್ಯ ಸರ್ಕಾರವನ್ನು ಎಚ್ಚರಿಸಿದೆ.
ಪಶ್ಚಿಮ ಬಂಗಾಳದ ಕೆಲವು ಗಲಭೆಪೀಡಿತ ಪ್ರದೇಶಗಳ ಪ್ರತ್ಯಕ್ಷದರ್ಶನ ಮಾಡಿ ಹಿಂದಿರುಗಿದ ಸಚಿವ ಜಾರ್ಜ್ ಫರ್ನಾಂಡಿಸ್, ಗೃಹ ಸಚಿವ ಎಲ್.ಕೆ. ಅಡ್ವಾಣಿ ಅವರೊಡನೆ ಸಮಾಲೋಚನೆ ನಡೆಸಿದ ಕೆಲವೇ ಹೊತ್ತಿನಲ್ಲಿಯೇ ಗೃಹ ಖಾತೆ ಎರಡು ಪುಟಗಳ ಎಚ್ಚರಿಕೆಯ ಪತ್ರವನ್ನು ಅಲ್ಲಿನ ಸರ್ಕಾರಕ್ಕೆ ಕಳುಹಿಸಿತು.
ಕೆರೆಯಲ್ಲಿ ಮುಳುಗಿ ಮೂವರು ಸಾವು
ಶ್ರೀನಿವಾಸಪುರ, ಸೆಪ್ಟೆಂಬರ್ 9– ಮೂವರು ಶಾಲಾ ಬಾಲಕಿಯರು ಕೆರೆಯಲ್ಲಿ ಮುಳುಗಿ ಸತ್ತಿರುವ ಘಟನೆ ಶ್ರೀನಿವಾಸಪುರ ತಾಲ್ಲೂಕಿನ ಮುತ್ತಕ ಗ್ರಾಮದಲ್ಲಿ ನಡೆದಿದೆ.
ಸತ್ತವರನ್ನು ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿಯರಾದ ರೇಣುಕಾ (14), ಲಾವಣ್ಯ (14) ಹಾಗೂ ರಾಧಿಕ (14) ಎಂದು ಗುರುತಿಸಲಾಗಿದೆ.
ನತದೃಷ್ಟ ಬಾಲಕಿಯರು ಏಳನೇ ತರಗತಿಯ ಅಂಕಪಟ್ಟಿ ತರುವ ಸಲುವಾಗಿ ಈ ಹಿಂದೆ ತಾವು ವ್ಯಾಸಂಗ ಮಾಡಿದ ಮರಿಯಮ್ಮಪೇಟೆ ಶಾಲೆಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.