
ಜನತಾದಳ ಬಣಗಳ ವಿಲೀನಕ್ಕೆ ಮತ್ತೆ ಚಾಲನೆ
ಬೆಂಗಳೂರು, ನ. 18– ಕೃಷಿ ಉತ್ಪನ್ನಗಳ ಬೆಲೆ ಕುಸಿತದಂಥ ವಿಷಯಗಳಲ್ಲಿ ರಾಜಕೀಯ ಕಾರಣದಿಂದ ದೂರ ಉಳಿಯುವುದು ರೈತರು, ಸಾಮಾನ್ಯ ಜನರ ಹಿತದೃಷ್ಟಿಯಿಂದ ಸರಿಯಲ್ಲ ಎಂದು ಜನತಾದಳ ಉಭಯ ಬಣಗಳು ಮತ್ತು ಈಗ ಪಕ್ಷೇತರರಾಗಿ ಕುಳಿತಿರುವ ಜನತಾದಳದ ಮಾಜಿ ಸದಸ್ಯರು, ಅಭಿಪ್ರಾಯಪಡುವ ಮೂಲಕ ಈ ಬಣಗಳ ವಿಲೀನಕ್ಕೆ ಮತ್ತಷ್ಟು ಚಾಲನೆ ಸಿಕ್ಕಂತಾಗಿದೆ.
ಕೇಂದ್ರದ ಮಾಜಿ ಸಚಿವ ಮತ್ತು ಜನತಾದಳ (ಎಸ್) ಧುರೀಣ ಎಸ್.ಆರ್. ಬೊಮ್ಮಾಯಿ ಅವರ ಮನೆಯಲ್ಲಿ ಶುಕ್ರವಾರ ರಾತ್ರಿ ಸುಮಾರು ಮೂರು ಗಂಟೆಗೂ ಹೆಚ್ಚುಕಾಲ ಈ ಎಲ್ಲ ಧುರೀಣರು ಒಂದೇ ಕಡೆ ಸೇರಿ ಚರ್ಚೆ ಮಾಡಿರುವುದರಿಂದ ಈ ಇಂಗಿತ ವ್ಯಕ್ತವಾಗಿದೆ.
ಮರಕ್ಕೆ ಬಸ್ ಡಿಕ್ಕಿ: 8 ಸಾವು
ಶಿವಮೊಗ್ಗ, ನ. 18– ಖಾಸಗಿ ಬಸ್ಸೊಂದು ರಸ್ತೆಬದಿಯ ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ಓರ್ವ ಮಹಿಳೆ ಸೇರಿದಂತೆ 8 ಜನರು ಸ್ಥಳದಲ್ಲೇ ಸತ್ತು, 30 ಜನರು ಗಾಯಗೊಂಡ ಘಟನೆ ಶಿವಮೊಗ್ಗ–ಸಾಗರ ರಸ್ತೆಯ ಆನಂದಪುರ ಬಳಿ ಇಂದು ಮಧ್ಯಾಹ್ನ ಸಂಭವಿಸಿದೆ.
ಶಿವಮೊಗ್ಗದಿಂದ ಆನಂದಪುರಂ ಮಾರ್ಗವಾಗಿ ಸವಳಂಗಕ್ಕೆ ಹೋಗುತ್ತಿದ್ದ ‘ಆಂಜನೇಯ’ ಬಸ್ಸು, ಇನ್ನೊಂದು ಬಸ್ಸನ್ನು ಹಿಂದಕ್ಕೆ ಹಾಕುವ ಪ್ರಯತ್ನದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಅಪ್ಪಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.