ADVERTISEMENT

25 ವರ್ಷಗಳ ಹಿಂದೆ ಮಂಗಳವಾರ 7-10-1997

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2022, 20:00 IST
Last Updated 6 ಅಕ್ಟೋಬರ್ 2022, 20:00 IST
   

ರತನ್ ಟಾಟಾ ಫೋನ್ ಕದ್ದಾಲಿಕೆ: ತನಿಖೆಗೆ ಆದೇಶ

ನವದೆಹಲಿ, ಅ. 6 (ಯುಎನ್ಐ)– ‘ಟಾಟಾ ಚಹಾ ಮತ್ತು ಉಲ್ಫಾ’ ಹಗರಣ ಕುರಿತು ಖ್ಯಾತ ಉದ್ಯಮಿ ರತನ್ ಟಾಟಾ ಹಾಗೂ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಅವರು ದೂರವಾಣಿ ಮೂಲಕ ನಡೆಸಿದ ಸಂಭಾಷಣೆಯನ್ನು ಕದ್ದಾಲಿಸಲಾಗಿದೆ ಎಂಬ ಆರೋಪದ ಬಗ್ಗೆ ತನಿಖೆ ಆರಂಭಿಸುವಂತೆ ಗೃಹ ಕಾರ್ಯದರ್ಶಿ ಆದೇಶ ನೀಡಿದ್ದಾರೆ.

‘ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ಈ ಕದ್ದಾಲಿಕೆಯಲ್ಲಿ ಷಾಮೀಲಾಗಿಲ್ಲ. ಈ
ಅವ್ಯವಹಾರದಲ್ಲಿ ಯಾವ ಶಕ್ತಿಗಳ ಕೈವಾಡ ಇದೆ ಎಂಬ ಬಗ್ಗೆ ತನಿಖೆ ನಡೆಸಬೇಕು’ ಎಂದು ಗೃಹ ಕಾರ್ಯದರ್ಶಿ ಪದ್ಮನಾಭಯ್ಯ ಅವರು ಟೆಲಿಕಾಂ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ADVERTISEMENT

ರತನ್ ಟಾಟಾ ಅವರು ಮುಂಬೈನ ಬಾಂಬೆ ಡೈಯಿಂಗ್‌ನ ಮುಖ್ಯಸ್ಥ ನುಸ್ಲಿ ವಾಡಿಯಾ ಜೊತೆಗೆ ನಡೆಸಿದ ಸಂಭಾಷಣೆಯನ್ನು ಕೂಡಾ ಕದ್ದಾಲಿಸಲಾಗಿದೆ ಎಂದು ಕೆಲವು ಪ್ರಮುಖ ಉದ್ಯಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಪ್ರಧಾನಿ ಗುಜ್ರಾಲ್

ಜೊಹಾನ್ಸ್‌ಬರ್ಗ್, ಅ. 6 (ಯುಎನ್ಐ)– ತಮ್ಮ ಮೂರು ಆಫ್ರಿಕನ್ ರಾಷ್ಟ್ರಗಳ ಪ್ರವಾಸದ ಎರಡನೇ ಹಂತವಾಗಿ ಪ್ರಧಾನಿ ಐ.ಕೆ. ಗುಜ್ರಾಲ್ ಇಂದು ಉಗಾಂಡದ ರಾಜಧಾನಿ ಕಂಪಾಲದಿಂದ ಇಂದು ಇಲ್ಲಿಗೆ ಆಗಮಿಸಿದರು.

ಆಫ್ರಿಕನ್ ರಾಷ್ಟ್ರಗಳ ಜತೆ, ವಿಶೇಷವಾಗಿ ದಕ್ಷಿಣ ಆಫ್ರಿಕಾದ ಜತೆ ಬಲವಾದ ಆರ್ಥಿಕ ಮತ್ತು ವ್ಯಾಪಾರೀ ಸಂಬಂಧ ಕುದುರಿಸುವುದು ಈ ಭೇಟಿಯ ಉದ್ದೇಶ.

ದಕ್ಷಿಣ ಆಫ್ರಿಕಾದ ಜತೆ ಹೊಸ ಪಾಲುದಾರಿಕೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಅವರು ದಕ್ಷಿಣ ಆಫ್ರಿಕಾ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರ ಜತೆ ಮಾತುಕತೆ ನಡೆಸಲಿದ್ದಾರೆ.

ಲಂಕಾ ಕಾಳಗ: 202 ಸಾವು

ಕೊಲಂಬೊ, ಅ. 6 (ಪಿಟಿಐ)– ಶ್ರೀಲಂಕಾದ ಉತ್ತರ ಮತ್ತು ಪೂರ್ವಭಾಗದಲ್ಲಿ ಎಲ್‌ಟಿಟಿಇ ಮತ್ತು ಭದ್ರತಾ ಪಡೆಗಳ ನಡುವೆ ಮತ್ತೆ ಕಾಳಗ ಆರಂಭವಾಗಿದ್ದು, ನಿನ್ನೆ ಸಂಜೆಯಿಂದೀಚೆಗೆ 160 ತಮಿಳು ಉಗ್ರರು ಮತ್ತು 42 ಮಂದಿ ಸೈನಿಕರು ಸತ್ತಿದ್ದಾರೆ. ಅಲ್ಲದೆ ಕಾಳಗದಲ್ಲಿ ಸುಮಾರು 260 ಮಂದಿಗೆ ಗಾಯಗಳಾಗಿವೆ.

ಎಲ್‌ಟಿಟಿಇ ವಶದಲ್ಲಿರುವ ಉತ್ತರ ವನ್ನಿ ಪ್ರದೇಶವನ್ನು ಬಿಡಿಸಿಕೊಳ್ಳಲು ಮುನ್ನುಗ್ಗುತ್ತಿ ರುವ ಸೇನೆಯನ್ನು ತಡೆಯಲು ತಮಿಳು ಬಂಡುಕೋರರು ನಿನ್ನೆ ಹಠಾತ್ ದಾಳಿ ನಡೆಸಿದರು.

ಇನ್ಸಾಟ್ 3ಎ ಉಡಾವಣೆಗೆಯೋಜನೆ

ಬೆಂಗಳೂರು, ಅ. 6– ಇನ್ಸಾಟ್– 2ಡಿ ಉಪಗ್ರಹವನ್ನು ಸ್ಥಗಿತಗೊಳಿಸಿದ ಕಾರಣ ದಿಂದ ಉಂಟಾದ ಸಂಪರ್ಕ ನಷ್ಟವನ್ನು ಸರಿದೂಗಿಸಲು ಶಕ್ತಿಶಾಲಿ ಇನ್ಸಾಟ್– 3ಎ ಉಪಗ್ರಹವನ್ನು ಬರುವ ವರ್ಷದ ಆರಂಭದಲ್ಲಿ ತುರ್ತಾಗಿ ಬಾಹ್ಯಾಕಾಶಕ್ಕೆ ಹಾರಿಬಿಡಲು ಇಸ್ರೊ ಯೋಜಿಸಿದೆ ಎಂದು ಇನ್ಸಾಟ್ ಯೋಜನೆಯ ನಿರ್ದೇಶಕ ಡಾ.ಕೆ. ನಾರಾಯಣನ್ ಇಂದು ಇಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.