ADVERTISEMENT

25 ವರ್ಷದ ಹಿಂದೆ | ಆಲಮಟ್ಟಿ: ರಾಜ್ಯದ ಪ್ರಸ್ತಾವ‌ ಐವರ ಸಂವಿಧಾನ ಪೀಠಕ್ಕೆ

​ಪ್ರಜಾವಾಣಿ ವಾರ್ತೆ
Published 3 ಮೇ 2024, 21:43 IST
Last Updated 3 ಮೇ 2024, 21:43 IST
   

ನವದೆಹಲಿ, ಮೇ 3 (ಪಿಟಿಐ, ಯುಎನ್‌ಐ)– ಆಲಮಟ್ಟಿ ಅಣೆಕಟ್ಟಿನಲ್ಲಿ ಕೃಷ್ಣಾ ನದಿಯಿಂದ 155 ಟಿಎಂಸಿ ಅಡಿ ನೀರು ಸಂಗ್ರಹಿಸುವ ಕರ್ನಾಟಕದ ಪ್ರಸ್ತಾವವನ್ನು ಸುಪ್ರೀಂ ಕೋರ್ಟ್ ಇಂದು ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠಕ್ಕೆ ವಹಿಸಿತು.

ಮುಖ್ಯ ನ್ಯಾಯಮೂರ್ತಿ ಎ.ಎಸ್. ಆನಂದ್ ಮತ್ತು ನ್ಯಾಯಮೂರ್ತಿಗಳಾದ ಬಿ.ಎನ್. ಕೃಪಾಲ್ ಹಾಗೂ ವಿ.ಎನ್. ಖಾರೆ ಅವರನ್ನೊಳಗೊಂಡಿರುವ ವಿಭಾಗೀಯ ಪೀಠ ಇಂದು ಈ ತೀರ್ಪನ್ನು ನೀಡಿ, ಆಲಮಟ್ಟಿ ಅಣೆಕಟ್ಟಿನಲ್ಲಿ ಇಂದು ಇರುವಂತೆ ಯಥಾಸ್ಥಿತಿಯನ್ನು ಕಾಪಾಡಿಕೊಂಡು ಹೋಗಬೇಕೆಂದು ತಿಳಿಸಿತು. ಸಂವಿಧಾನ ಪೀಠವು ಜುಲೈ 19ರಿಂದ ಕಾರ್ಯನಿರ್ವಹಿಸಲಿದೆ.

ಹೆಗಡೆ ಪ್ರಮುಖ ಬೆಂಬಲಿಗರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ADVERTISEMENT

ನವದೆಹಲಿ, ಮೇ 3– ಲೋಕಶಕ್ತಿ ನಾಯಕ ರಾಮಕೃಷ್ಣ ಹೆಗಡೆ ಅವರ ಆಪ್ತ ಬೆಂಬಲಿಗ
ರಾಗಿದ್ದ ಆರ್‌.ವಿ. ದೇಶಪಾಂಡೆ, ಗುರುಪಾದಪ್ಪ ನಾಗಮಾರಪಲ್ಲಿ, ಬಿ.ಆರ್. ಯಾವಗಲ್, ಪಿ.ಸಿ. ಸಿದ್ದನಗೌಡರ, ಪಿ.ಕೋದಂಡರಾಮಯ್ಯ ಮತ್ತು ವಿ.ಎಸ್. ಉಗ್ರಪ್ಪ ಅವರು ಬಹಳ ದಿನಗಳ ನಿರೀಕ್ಷೆಯಂತೆ ಇಂದು ವಿಧ್ಯುಕ್ತವಾಗಿ ಕಾಂಗ್ರೆಸ್ ಸೇರಿದರು.

ಜನತಾದಳ ಬಿಟ್ಟು ಹೆಗಡೆ ಅವರ ನವನಿರ್ಮಾಣ ವೇದಿಕೆ ಸೇರಿದ್ದ ಈ ಆರು ಮಂದಿಯು ಕಾಂಗ್ರೆಸ್ ಸೇರಿದ್ದರಿಂದ, ಕರ್ನಾಟಕದ ರಾಜಕೀಯ ಪರಿಸ್ಥಿತಿಯಲ್ಲಿ ಲೋಕಶಕ್ತಿಗೆ ಭಾರಿ ಹೊಡೆತ ಬಿದ್ದಂತಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಆಜಾದ್ ಈ ಆರು ಮಂದಿ ಸೇರ್ಪಡೆಯನ್ನು ಪ್ರಕಟಿಸಿದರು.

‘ದೇಶಪಾಂಡೆ, ಗುರುಪಾದಪ್ಪ, ಯಾವಗಲ್ ಮತ್ತು ಸಿದ್ದನಗೌಡರ ಅವರು ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಪತ್ರಗಳನ್ನು ತಮಗೆ ಕಳುಹಿಸಿದ್ದು, ನಾಳೆ ವಿಧಾನಸಭೆ ಸ್ಪೀಕರ್‌ಗೆ ಅವುಗಳನ್ನು
ಸಲ್ಲಿಸಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ
ಎಸ್‌.ಎಂ.ಕೃಷ್ಣ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.