ADVERTISEMENT

25 ವರ್ಷಗಳ ಹಿಂದೆ | ಭಾರತೀಯರು 100 ಕೋಟಿ; ಪ್ರಧಾನಿ ಕಳವಳ

ಶುಕ್ರವಾರ, 12–5–2000

​ಪ್ರಜಾವಾಣಿ ವಾರ್ತೆ
Published 12 ಮೇ 2025, 0:30 IST
Last Updated 12 ಮೇ 2025, 0:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಭಾರತೀಯರು 100 ಕೋಟಿ; ಪ್ರಧಾನಿ ಕಳವಳ

ನವದೆಹಲಿ, ಮೇ 11– ಭಾರತದ ಜನಸಂಖ್ಯೆಯು ಇಂದು ನೂರು ಕೋಟಿ ದಾಟಿದ ಬಗೆಗೆ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ತೀವ್ರ ಕಳವಳ ವ್ಯಕ್ತಪಡಿಸಿದರಾದರೂ, ಜನಸಂಖ್ಯಾ ನಿಯಂತ್ರಣ ಮತ್ತು ಜನರ ಆರೋಗ್ಯ ಹಾಗೂ ಮೂಲ ಸೌಕರ್ಯಗಳ ಬಗೆಗೆ ಹೊಸ ಜನಸಂಖ್ಯಾ ನೀತಿಯೊಂದನ್ನು ಪ್ರಕಟಿಸಿದರು.

ಯೋಜನಾ ಆಯೋಗವು ಸಿದ್ಧಪಡಿಸಿದ ಜನಸಂಖ್ಯಾ ನೀತಿಯನ್ನು ಆಯೋಗದ ಉಪಾಧ್ಯಕ್ಷ ಕೆ.ಸಿ. ಪಂತ್‌ ಇಂದು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿ, ಪ್ರಸ್ತುತ ವರ್ಷದಲ್ಲಿ ತುರ್ತಾಗಿ ಕೈಗೆತ್ತಿಕೊಳ್ಳಬೇಕಾದ ಕಾರ್ಯಕ್ರಮಗಳ ವಿವರ ನೀಡಿದರು.

ADVERTISEMENT

ನೂತನ ಜನಸಂಖ್ಯಾ ನೀತಿಯನ್ನು ಅಕ್ಷರಶಃ ಜಾರಿಗೆ ತಂದದ್ದೇ ಆದರೆ, ಮುಂದಿನ 2010ನೇ ಇಸವಿ ವೇಳೆಗೆ ಒಟ್ಟು ಜನಸಂಖ್ಯೆಯು 110 ಕೋಟಿ ಮಾತ್ರ ಮುಟ್ಟಲು ಸಾಧ್ಯ ಎಂದು ಅಂದಾಜಿಸಲಾಗಿದೆ.

ಅಮೆರಿಕ ಕಂಪನಿಯ ಬೇವಿನ ಪೇಟೆಂಟ್‌ ರದ್ದು

ಬರ್ಲಿನ್‌, ಮೇ 11 (ಪಿಟಿಐ)– ಅಮೆರಿಕದ ಕೃಷಿ ಇಲಾಖೆ ಮತ್ತು ಡಬ್ಲ್ಯು.ಆರ್‌. ಗ್ರೇಸ್‌
ರಾಸಾಯನಿಕ ಸಂಸ್ಥೆಗೆ 1995ರಲ್ಲಿ ಜಂಟಿಯಾಗಿ ನೀಡಿದ್ದ ಬೇವಿನ ಮರದ ಎಣ್ಣೆ ತೆಗೆಯುವ ಪೇಟೆಂಟ್‌ ಅನ್ನು ಯುರೋಪಿನ ಪೇಟೆಂಟ್‌ ಕಾರ್ಯಾಲಯ ವಾಪಸ್‌ ಪಡೆದಿದೆ. ಭಾರತದ ಬೇವು ಕೃಷಿಕರಿಗೆ ಇದು ವರದಾನವಾಗಿದೆ ಎಂದು ವರ್ಣಿಸಲಾಗಿದೆ.

ಈ ಬೇವಿನ ಪೇಟೆಂಟ್‌ ನೀಡಿಕೆ ವಿರುದ್ಧ ಮೂರು ಸಂಸ್ಥೆಗಳು ಆಕ್ಷೇಪ ವ್ಯಕ್ತಪಡಿಸಿ ಸಲ್ಲಿಸಿದ್ದ ಅರ್ಜಿಯನ್ನು ಯುರೋಪ್‌ ಪೇಟೆಂಟ್‌ ಕಾರ್ಯಾಲಯ ಪುರಸ್ಕರಿಸಿತು. ಬೇವಿನ ಮರದಿಂದ ಎಣ್ಣೆ ತೆಗೆಯುವ ಕಾರ್ಯ 1994ಕ್ಕಿಂತ ಹಿಂದೆ ಭಾರತದಲ್ಲಿ ನಡೆಯುತ್ತಿತ್ತು ಎಂಬ ವಾದವನ್ನು ಎತ್ತಿ ಹಿಡಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.