ADVERTISEMENT

25 ವರ್ಷಗಳ ಹಿಂದೆ: ಬುಧವಾರ 27.5.1998

ಪ್ರಜಾವಾಣಿ ವಿಶೇಷ
Published 27 ಮೇ 2023, 1:12 IST
Last Updated 27 ಮೇ 2023, 1:12 IST
25 ವರ್ಷದ ಹಿಂದೆ: 28-6-1997
25 ವರ್ಷದ ಹಿಂದೆ: 28-6-1997   

ಕೊರತೆ ಕೂಗಿಗೆ ತಡೆ ಹಾಕಿ, ರಾಜ್ಯಾದ್ಯಂತ ಮಾರುಕಟ್ಟೆಗೆ ಬಂದ ಪಠ್ಯ ಪುಸ್ತಕ

ಬೆಂಗಳೂರು, ಮೇ 26– ‘ರಾಜ್ಯದಲ್ಲಿ ಒಂದರಿಂದ ಹತ್ತನೇ ತರಗತಿಯವರೆಗೆ ನಿಗದಿಪಡಿಸಿರುವ ಎಲ್ಲ ಪಠ್ಯ ಪುಸ್ತಕಗಳು ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಈ ಬಾರಿ ಯಾವುದೇ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳ ಕೊರತೆ ಉಂಟಾಗದಂತೆ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

1998–99ನೇ ಸಾಲಿನ ಅಗತ್ಯವಾದ ಪಠ್ಯ ಪುಸ್ತಕಗಳ ಮುದ್ರಣ ಮತ್ತು ಮಾರಾಟದ ಜವಾಬ್ದಾರಿಯನ್ನು 27 ಖಾಸಗಿ ಪ್ರಕಾಶಕರು– ಮುದ್ರಕರಿಗೆ ವಹಿಸಲಾಗಿದ್ದು, ‘ಇವರೆಲ್ಲರೂ ಏಪ್ರಿಲ್‌ ಕೊನೆಯ ವೇಳೆಗೆ ‍‍ಪಠ್ಯ ಪುಸ್ತಕಗಳನ್ನು ಮುದ್ರಿಸಿ ಮಾರಾಟಕ್ಕೆ ಬಿಡುಗಡೆ ಮಾಡಿದ್ದಾರೆ. ಇದರಿಂದಾಗಿ ಎಲ್ಲ ವಿದ್ಯಾರ್ಥಿಗಳಿಗೂ ಸಕಾಲದಲ್ಲಿ ಪುಸ್ತಕಗಳು ದೊರೆಯಲಿವೆ. ಈ ಎಲ್ಲ ಪಠ್ಯ ಪುಸ್ತಕಗಳು 1986 ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉಲ್ಲೇಖಿಸಿರುವ 10 ಮೂಲಭೂತ ಅಂಶಗಳು ಹಾಗೂ 84 ಮಾನವೀಯ ಮೌಲ್ಯಗಳನ್ನು ಒಳಗೊಂಡಿವೆ’ ಎಂದರು.

ADVERTISEMENT

===

ಅಣ್ವಸ್ತ್ರದ ವಿರುದ್ಧ ವಿಜ್ಞಾನಿಗಳ ಚಳವಳಿ

ನವದೆಹಲಿ, ಮೇ 26 (ಪಿಟಿಐ)– ಭಾರತ ಈಚೆಗೆ ನಡೆಸಿದ ಅಣ್ವಸ್ತ್ರ ಸಾಧನ ಪರೀಕ್ಷೆಯ ವಿರುದ್ಧದ ಅಸಮಾಧಾನದ ಹೊಗೆ ಕ್ರಮೇಣ ದಟ್ಟವಾಗುತ್ತಿದ್ದು, ವಿಜ್ಞಾನಿಗಳ ಒಂದು ಗುಂಪು ಅಣ್ವಸ್ತ್ರ ಪರೀಕ್ಷೆ ವಿರುದ್ಧ ಚಳವಳಿಗೆ ಸಿದ್ಧವಾಗಿದೆ. ಬೆಂಗಳೂರಿನ ವಿಜ್ಞಾನಿಯೊಬ್ಬರು ಅಣ್ವಸ್ತ್ರ ಪರೀಕ್ಷೆ ವಿರುದ್ಧ ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದಾರೆ.

‘ಭಾರತ ಅಣ್ವಸ್ತ್ರವನ್ನು ತಯಾರಿಸುವುದಕ್ಕೆ ನಮ್ಮ ವಿರೋಧವಿದೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಬೆಂಗಳೂರು ಘಟಕದ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್ ವಿಭಾಗದ ವಿಜ್ಞಾನಿ ಡಿ.ಪಿ.ಸೇನ್‌ಗುಪ್ತ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ತಮ್ಮ ಈ ಅಭಿಯಾನಕ್ಕೆ ಸಂಸ್ಥೆಯ ಇತರ ಹಲವಾರು ಮಂದಿ ವಿಜ್ಞಾನಿಗಳು ಬೆಂಬಲ ಸೂಚಿಸಿದ್ದಾರೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.