ADVERTISEMENT

25 ವರ್ಷಗಳ ಹಿಂದೆ | ಕೋಮುಪಕ್ಷದ ಜತೆ ಸೇರಿದವರಿಗೆ ಪಾಠ: ಗೌಡರ ಕರೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 23:41 IST
Last Updated 31 ಜುಲೈ 2024, 23:41 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಮಿರಾಜುದ್ದೀನ್ ರಾಜೀನಾಮೆ

ಬೆಂಗಳೂರು, ಜುಲೈ 31– ಬಿಜೆಪಿ ನೇತೃತ್ವದ ರಾಷ್ಟ್ರೀಯ ಜನತಾಂತ್ರಿಕ ಮೈತ್ರಿಕೂಟವನ್ನು ಸೇರುವ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ನಿರ್ಧಾರವನ್ನು ವಿರೋಧಿಸಿ ಪೌರಾಡಳಿತ ಸಚಿವ ಮಿರಾಜುದ್ದೀನ್ ಪಟೇಲ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ದೇವೇಗೌಡ ನೇತೃತ್ವದ ಜನತಾದಳದಲ್ಲಿ ಉಳಿಯಲು ನಿರ್ಧರಿಸಿದ್ದಾರೆ.

ಜನತಾದಳ ಇಬ್ಭಾಗವಾದ ನಂತರ ಪಟೇಲ್ ಸಂಪುಟಕ್ಕೆ ರಾಜೀನಾಮೆ ನೀಡುತ್ತಿರುವವರಲ್ಲಿ ಮಿರಾಜುದ್ದೀನ್ ಪಟೇಲ್ ಐದನೆಯವರಾಗಿದ್ದಾರೆ. ಇದಕ್ಕೆ ಮೊದಲು, ಸಚಿವರಾದ ಡಿ.ಮಂಜುನಾಥ್, ಮಾಲೀಕಯ್ಯ ಗುತ್ತೇದಾರ್, ಬಸವರಾಜ ಶಿವಣ್ಣನವರ್ ಮತ್ತು ಮುನಿಯಪ್ಪ ಮುದ್ದಪ್ಪ ಅವರು ಸಂಪುಟಕ್ಕೆ ರಾಜೀನಾಮೆ ನೀಡಿದ್ದರು.

ADVERTISEMENT

ಜನತಾದಳ ವಿಧ್ಯುಕ್ತವಾಗಿ ಇಬ್ಭಾಗವಾದ ದಿನ ಮುಖ್ಯಮಂತ್ರಿ ಪಟೇಲ್ ಅವರೇ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಂಟು ಮಂದಿ ಸಚಿವರನ್ನು ವಜಾ ಮಾಡಿದ್ದರು.

ಕೋಮುಪಕ್ಷದ ಜತೆ ಸೇರಿದವರಿಗೆ ಪಾಠ: ಗೌಡರ ಕರೆ

ಬೆಂಗಳೂರು, ಜುಲೈ 31– ‘ಯಾರೇ ಪಕ್ಷ ಬಿಟ್ಟು ಹೋಗಿದ್ದರೂ ನಮ್ಮ ಬಲ ಕುಗ್ಗಿಲ್ಲ. ನಮ್ಮ ಸ್ಥೈರ್ಯ ಕುಂದಿಲ್ಲ; ಸ್ವಾರ್ಥ ಸಾಧನೆಗೆ ಬೆನ್ನಿಗೆ ಚೂರಿ ಹಾಕಿ ಕೋಮುವಾದಿ ಪಕ್ಷದ ಜತೆಗೆ ಸೇರಿರುವವರಿಗೆ ತಕ್ಕ ಪಾಠ ಕಲಿಸಿ’ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಇಂದು ಮತದಾರರಲ್ಲಿ ಮನವಿ ಮಾಡಿಕೊಂಡರು.

ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ವಾಜಪೇಯಿ ಸರ್ಕಾರ ರೈತ ವಿರೋಧಿ ಸರ್ಕಾರ. ಮುಂಬೈ–ಗುಜರಾತ್‌ನಂತಹ ಭಾರಿ ವರ್ತಕರ ಹಿಡಿತಕ್ಕೆ ಸಿಕ್ಕಿರುವ ಬಿಜೆಪಿ ಮತ್ತು ಮಿತ್ರಪಕ್ಷಗಳ ಬುಡವನ್ನು ಕೀಳಬೇಕಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.