ADVERTISEMENT

25 ವರ್ಷಗಳ ಹಿಂದೆ | ಶನಿವಾರ, 3–6–1995

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 20:41 IST
Last Updated 2 ಜೂನ್ 2020, 20:41 IST

ರಾಯಚೂರು: ಇನ್ನೆರಡು ಶಾಖೋತ್ಪನ್ನ ಘಟಕಗಳ ನಿರ್ಮಾಣ
ಬೆಂಗಳೂರು, ಜೂನ್‌ 2– ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಸ್ಥಾವರದಲ್ಲಿ 1,650 ಕೋಟಿ ರೂಪಾಯಿಗಳ ವೆಚ್ಚದ ಐದು ಮತ್ತು ಆರನೇ ಘಟಕಗಳ ನಿರ್ಮಾಣ ಕಾರ್ಯವನ್ನು ಕರ್ನಾಟಕ ವಿದ್ಯುತ್‌ ನಿಗಮ ಕೈಗೊಳ್ಳಲಿದೆ.

ದಾವಣಗೆರೆಯಲ್ಲಿ ಡಕಾಯಿತಿ: ಒಬ್ಬರ ಸಾವು
ಚಿತ್ರದುರ್ಗ, ಜೂನ್‌ 2– ರಾಷ್ಟ್ರೀಯ ಹೆದ್ದಾರಿ ನಾಲ್ಕರ ಬೈಪಾಸ್‌ನ ದಾವಣಗೆರೆ ವಿನಾಯಕ ನಗರ ಬಡಾವಣೆಯಲ್ಲಿ ಇಂದು ಬೆಳಗಿನ ಜಾವ 2.30ರಲ್ಲಿ ನಡೆದ ಡಕಾಯಿತಿ ಪ್ರಕರಣದಲ್ಲಿ ಒಬ್ಬ ಸತ್ತು
ಎಂಟು ಮಂದಿ ಗಾಯಗೊಂಡಿದ್ದಾರೆ.

ಸುಮಾರು 15ರಿಂದ 20 ಮಂದಿಯಿದ್ದ ಡಕಾಯಿತರ ತಂಡವು ಮಲ್ಲೇಶಪ್ಪ ಎಂಬುವರ ಮನೆಗೆ ಸ್ಟೇರ್‌ಕೇಸ್‌
ಮೂಲಕ ಪ್ರವೇಶಿಸಿತು ಎನ್ನಲಾಗಿದೆ. ಶಬ್ದದಿಂದ ಮನೆಯಲ್ಲಿದ್ದವರೆಲ್ಲಾ ಎಚ್ಚರಗೊಂಡರು. ಆಗ ಡಕಾಯಿತರು ಅವರನ್ನೆಲ್ಲಾ ತೀವ್ರವಾಗಿ ಥಳಿಸಿದ್ದರಿಂದ 9 ಮಂದಿ ಗಾಯಗೊಂಡರು. ತೀವ್ರವಾಗಿ ಗಾಯಗೊಂಡಿದ್ದ ಸಿದ್ಧೇಶ್‌ ಹೊಟ್ಟೇನಹಳ್ಳಿ (22) ಆಸ್ಪತ್ರೆಯ ದಾರಿಯಲ್ಲಿ ಅಸುನೀಗಿದರು.

ADVERTISEMENT

‘ಯುನಿಷೆ ಏಪ್ರಿಲ್‌’ಗೆ ಸ್ವರ್ಣ ಕಮಲ ನಾನಾ– ದೇಬಶ್ರೀ ಉತ್ತಮ ನಟ,ನಟಿ
ನವದೆಹಲಿ, ಜೂನ್‌ 2 (ಯುಎನ್‌ಐ)– 1994ನೇ ಸಾಲಿನ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಗಳಿಸಿದ ರಿತುಪರ್ಣೊ ಘೋಷ್‌ ಅವರ ‘ಯುನಿಷೆ ಏಪ್ರಿಲ್‌’ ಬಂಗಾಳಿ ಚಿತ್ರಕ್ಕೆ ಸ್ವರ್ಣ ಕಮಲ ಪ್ರಶಸ್ತಿ ದೊರಕಿದೆ. ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ನಗದು ಬಹುಮಾನ ಲಭಿಸಿದೆ.

‘ಯುನಿಷೆ ಏಪ್ರಿಲ್‌’ ಚಿತ್ರದ ನಾಯಕಿ ದೇಬಶ್ರೀ ರಾಯ್‌ ಅವರಿಗೆ ಅತ್ಯುತ್ತಮ ನಟಿ ಹಾಗೂ ‘ಕ್ರಾಂತಿವೀರ್‌’ ಚಿತ್ರದ ನಟನೆಗಾಗಿ ನಾನಾ ಪಾಟೇಕರ್‌ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಈ ಇಬ್ಬರಿಗೂ ತಲಾ ರಜತ ಕಮಲ ಪ್ರಶಸ್ತಿ ಹಾಗೂ 10 ಸಾವಿರ ರೂಪಾಯಿ ನಗದು ಬಹುಮಾನ ದೊರೆತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.