ADVERTISEMENT

25 ವರ್ಷಗಳ ಹಿಂದೆ | ಶುಕ್ರವಾರ, 7–7–1995

​ಪ್ರಜಾವಾಣಿ ವಾರ್ತೆ
Published 6 ಜುಲೈ 2020, 19:31 IST
Last Updated 6 ಜುಲೈ 2020, 19:31 IST

ಕನ್ನಡದಲ್ಲಿ ಸಂದೇಶ ರವಾನೆ: ತಾಲ್ಲೂಕುಗಳಿಗೆ ‘ನಿಕ್‌ನೆಟ್‌’

ಬೆಂಗಳೂರು, ಜುಲೈ 6– ರಾಜ್ಯದ ಎಲ್ಲ ತಾಲ್ಲೂಕುಗಳಿಗೆ ಕ್ಷಣಾರ್ಧದೊಳಗಾಗಿ ಕನ್ನಡದಲ್ಲಿ ತುರ್ತು ಸಂದೇಶ, ಮಾಹಿತಿಗಳನ್ನು ಕಳಿಸುವ– ತರಿಸಿಕೊಳ್ಳುವ ‘ನಿಕ್‌ನೆಟ್‌’ ಜಾಲವನ್ನು ಇಂದು ಇಲ್ಲಿ ವಿಧ್ಯುಕ್ತವಾಗಿ ಆರಂಭಿಸಲಾಯಿತು. ಪ್ರಾದೇಶಿಕ ಭಾಷೆಯೊಂದರಲ್ಲಿ ಈ ತಂತ್ರಜ್ಞಾನ ವನ್ನು ಆಡಳಿತದಲ್ಲಿ ನೇರವಾಗಿ ಬಳಸಲು ಆರಂಭ ಮಾಡಿರುವ ಭಾರತದ ಮೊತ್ತಮೊದಲ ರಾಜ್ಯ ಎಂಬ ಹೆಮ್ಮೆಯನ್ನು ಈ ಮೂಲಕ ಕರ್ನಾಟಕ ತನ್ನದಾಗಿಸಿ ಕೊಂಡಿತು.

ರಾಜಕಾರಣಿಗಳ ಹಣದ ದಾಹ: ಸ್ಪೀಕರ್ ಆಕ್ರೋಶ

ADVERTISEMENT

ಬೆಂಗಳೂರು, ಜುಲೈ 6– ಹಣ, ಹಣ, ಹಣ, ಅಗತ್ಯಕ್ಕಿಂತ ಹೆಚ್ಚಿಗೇಕೆ ಈ ಹಣ? ಕಾಗದ ತಿನ್ನೋದು ಕತ್ತೆಗಳು. ಅಲ್ಲಿಂದ– ಇಲ್ಲಿಂದ ಬಾಚಿ ಕೋಟ್ಯಂತರ ರೂಪಾಯಿ ನೋಟುಗಳನ್ನು ಕೂಡಿ ಹಾಕಿಕೊಂಡು ಕತ್ತೆಗಳ ತರಹ ತಿನ್ನಲಾದೀತೆ?

ಎಲ್ಲ ಅನಿಷ್ಟಗಳಿಗೆ ಕಾರಣವಾಗಿರುವ ಹಣದ ದುರಾಸೆಗೆ ವಿಧಾನಸಭಾ ಅಧ್ಯಕ್ಷ ರಮೇಶ್‌ ಕುಮಾರ್‌ ಅವರು ಇಂದು ಇಲ್ಲಿ ಕನ್ನಡಿ ಹಿಡಿದ ರೀತಿ ಇದು.

ವಾಮಮಾರ್ಗ ಹಿಡಿದು ಹಣ ಮಾಡುವವರನ್ನು ಪೊಲೀಸರು ಹಿಡಿಯ ದಿರಬಹುದು, ಲೋಕಾಯುಕ್ತ ಬಲೆಗೆ ಬೀಳದಿರಬಹುದು. ಆದರೆ ಮನುಷ್ಯನಿಗೆ ಪ್ರಜ್ಞೆ ಅನ್ನೋದು ಒಂದಿದೆ. ಅದು ಅಪರಾಧ ಪ್ರಜ್ಞೆಯಾಗಿ ಬದುಕಿನುದ್ದಕ್ಕೂ ಕಾಡುವುದು ಖಚಿತ ಎಂದು
ಎಚ್ಚರಿಸಿದರು.

‘ಶಾಸಕಾಂಗ ಮತ್ತು ಶಾಸನಗಳು’ ಎಂಬ ವಿಷಯವಾಗಿ ಬೆಂಗಳೂರು ವಕೀಲರ ಸಂಘದ ಸದಸ್ಯರನ್ನು ಉದ್ದೇಶಿಸಿ ಅವರು ಮಾತನಾಡಿದರು.

ತಾತಗುಣಿ ತೋಟ: ಅಂಗುಲ ಕಬಳಿಕೆಗೂ ಅವಕಾಶ ಇಲ್ಲ

ಬೆಂಗಳೂರು, ಜುಲೈ 6–ರೋರಿಚ್ ದಂಪತಿಗೆ ಸೇರಿದ ತಾತಗುಣಿ ತೋಟವನ್ನು ಮರು ಸರ್ವೆ ಮಾಡಲು ಆದೇಶ ನೀಡಿದ ಕಂದಾಯ ಸಚಿವ ಆರ್‌.ಎಲ್. ಜಾಲಪ್ಪ, ತೋಟದಲ್ಲಿ ಒಂದೇ ಒಂದು ಅಂಗುಲ ಭೂಮಿಯನ್ನು ಸಹ ಕಬಳಿಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಇಲ್ಲಿ ಘೋಷಿಸಿದರು.

ಕನಕಪುರ ರಸ್ತೆಯಲ್ಲಿರುವ ತಾತಗುಣಿ ತೋಟಕ್ಕೆ ಪೊಲೀಸ್ ಮತ್ತು ಕಂದಾಯ ಅಧಿಕಾರಿಗಳ ಜತೆ ಅವರು ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.