ADVERTISEMENT

25 ವರ್ಷಗಳ ಹಿಂದೆ: 9 ಅರಣ್ಯ ಸಿಬ್ಬಂದಿ ಅಪಹರಿಸಿದ ವೀರಪ್ಪನ್‌

14–07–1997

​ಪ್ರಜಾವಾಣಿ ವಾರ್ತೆ
Published 13 ಜುಲೈ 2022, 19:36 IST
Last Updated 13 ಜುಲೈ 2022, 19:36 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

9 ಅರಣ್ಯ ಸಿಬ್ಬಂದಿ ಅಪಹರಿಸಿದ ವೀರಪ್ಪನ್‌

ಬೆಂಗಳೂರು, ಜುಲೈ 13– ಕಳೆದ ಸುಮಾರು ಎಂಟು ವರ್ಷಗಳಿಂದ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳಿಗೆ ಸವಾಲಾಗಿರುವ ಕುಖ್ಯಾತ ನರಹಂತಕ– ಕಾಡುಗಳ್ಳ ವೀರಪ್ಪನ್‌ ಒಬ್ಬ ವನಪಾಲಕರೂ ಸೇರಿದಂತೆ ರಾಜ್ಯ ಅರಣ್ಯ ಇಲಾಖೆಯ ಒಂಬತ್ತು ಮಂದಿ ಸಿಬ್ಬಂದಿಯನ್ನು ಅಪಹರಣ ಮಾಡಿದ್ದು, ತನಗೆ ‘ಕ್ಷಮಾದಾನ’ ನೀಡದಿದ್ದರೆ ಎಲ್ಲ ಒತ್ತೆಯಾಳುಗಳನ್ನು ಕೊಲ್ಲುವ ಬೆದರಿಕೆ ಹಾಕಿದ್ದಾನೆ.

ಚಾಮರಾಜನಗರದಿಂದ ಸತ್ಯಮಂಗಲಕ್ಕೆ ಹೋಗುವ ಮಾರ್ಗದಲ್ಲಿರುವ ಹಾಗೂ ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಪುಣಜನೂರು ದಟ್ಟ ಅರಣ್ಯ ಪ್ರದೇಶದಲ್ಲಿ ಶನಿವಾರ ಬೆಳಿಗ್ಗೆ 9 ಗಂಟೆ ಸಮಯದಲ್ಲಿ ಶಸ್ತ್ರ ಸಜ್ಜಿತ ವೀರಪ್ಪನ್‌ ತನ್ನ ತಂಡದೊಂದಿಗೆ ಮಿಂಚಿನ ಕಾರ್ಯಾಚರಣೆ ನಡೆಸಿ, ಕರ್ತವ್ಯ ನಿರತರಾಗಿದ್ದ ಒಬ್ಬ ವನಪಾಲಕ, ಇಬ್ಬರು ಅರಣ್ಯ ರಕ್ಷಕರು ಹಾಗೂ ಆರು ಮಂದಿ ಅರಣ್ಯ ಕಾವಲುಗಾರರನ್ನು ಅಪಹರಿಸಿಕೊಂಡು ಹೋಗಿದ್ದಾನೆ.

ADVERTISEMENT

ಅರಣ್ಯ ಸಿಬ್ಬಂದಿಯನ್ನು ಅಪಹರಿಸಿರುವ ವೀರ‍ಪ್ಪನ್‌, ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ಮತ್ತು ಅರಣ್ಯ ಸಚಿವ ಗುರುಪಾದಪ್ಪ ನಾಗಮಾರಪಲ್ಲಿ ಅವರಿಗೆ ಪ್ರತ್ಯೇಕ ಕ್ಯಾಸೆಟ್‌ನಲ್ಲಿ ಧ್ವನಿಮುದ್ರಿತ ‘ಸಂದೇಶ’ ಕಳುಹಿಸಿದ್ದಾನೆ. ಎರಡು ಕ್ಯಾಸೆಟ್‌ಗಳಲ್ಲಿ ವೀರಪ್ಪನ್‌ ಕಳುಹಿಸಿದ ಸಂದೇಶ ಭಾನುವಾರ ಮುಖ್ಯಮಂತ್ರಿ ಮತ್ತು ಅರಣ್ಯ ಸಚಿವರಿಗೆ ತಲುಪಿದ ನಂತರವೇ ಅರಣ್ಯ ಸಿಬ್ಬಂದಿಯ ಅಪಹರಣವಾಗಿರುವ ವಿಚಾರ ಸರ್ಕಾರದ ಗಮನಕ್ಕೆ ಬಂದಿತು ಎನ್ನಲಾಗಿದೆ.

ಉಚಿತ ಪಠ್ಯಪುಸ್ತಕ ಮಾರಾಟ ಜಾಲ ಪತ್ತೆ

ಬೀದರ್‌, ಜುಲೈ 13– ರಾಜ್ಯ ಸರ್ಕಾರದ ‘ವಿದ್ಯಾ ವಿಕಾಸ’ ಮತ್ತು ‘ಅಕ್ಷಯ ಯೋಜನೆ’ಯಡಿ ಶಾಲಾ ಶಾಲಾ ಮಕ್ಕಳಿಗೆ ಉಚಿತವಾಗಿ ವಿತರಿಸಲು ಬಿಡುಗಡೆ ಮಾಡಬೇಕಾಗಿದ್ದ ಪುಸ್ತಕಗಳನ್ನು ಅಕ್ರಮವಾಗಿ ಖಾಸಗಿ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ಸುಭಾಷ್‌ ಪಾಟೀಲ್‌ ಅವರನ್ನು ಬಂಧಿಸಲು ವ್ಯಾಪಕ ಜಾಲ ಬೀಸಲಾಗಿದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಎನ್‌. ನಾಗರಾಜ ಅವರು ಇಂದು ಇಲ್ಲಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಾಗಲೇ ಈ ಸಂಬಂಧ ‌ಬೀದರ್‌ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಸಂಗಪ್ಪಾ ಜಲ್ದೆ ಅವರನ್ನು ನಿನ್ನೆ ಬಂಧಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.