ADVERTISEMENT

ಕಾಶ್ಮೀರ: ಪಾಕ್ ನಿರ್ಣಯ ವಾಪಸ್

1994

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2019, 17:53 IST
Last Updated 9 ಮಾರ್ಚ್ 2019, 17:53 IST

ಕಾಶ್ಮೀರ: ಪಾಕ್ ನಿರ್ಣಯ ವಾಪಸ್

ಜಿನೀವಾ, ಮಾ. 9 (ಪಿಟಿಐ, ಯುಎನ್‌ಐ)– ಇಲ್ಲಿ ನಡೆದಿರುವ ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಮಾವೇಶದಲ್ಲಿ ಕಾಶ್ಮೀರದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆ ನಡೆದಿದೆ ಎಂದು ಅರೋಪಿಸಿ ತಾನು ಮಂಡಿಸಿದ್ದ ನಿರ್ಣಯಕ್ಕೆ ಸೋಲುಂಟಾಗುವುದು ಖಚಿತ ಎಂಬುದು ಮನದಟ್ಟಾದ ಹಿನ್ನೆಲೆಯಲ್ಲಿ ಪಾಕಿಸ್ತಾನವು ಇಂದು ರಾತ್ರಿ ಅದನ್ನು ಕೊನೆಗಳಿಗೆಯಲ್ಲಿ ಹಿಂತೆಗೆದುಕೊಂಡಿತು.

ಮಾನ ಉಳಿಸಿಕೊಳ್ಳುವ ತಂತ್ರವಾಗಿ ಪಾಕಿಸ್ತಾನವು ನಿರ್ಣಯವನ್ನು ಹಿಂತೆಗೆದುಕೊಂಡಿರುವುದು ಕಾಶ್ಮೀರ ವಿಷಯವನ್ನು ಜಾಗತೀಕರಣಗೊಳಿಸುವ ಬೆನಜೀರ್ ಸರ್ಕಾರದ ಯತ್ನಕ್ಕೆ ಭಾರಿ ಹಿನ್ನಡೆ ಆದಂತಾಗಿದೆ. ಮಹತ್ವದ ಈ ಬೆಳವಣಿಗೆ ಕಾಶ್ಮೀರದ ಮೇಲೆ ಭಾರತದ ನಿಲುವಿಗೆ ದೊರೆತ ಜಯ ಎಂದೇ ವ್ಯಾಖ್ಯಾನಿಸಲಾಗಿದೆ. ಅಲ್ಲದೆ ಇದರಿಂದ ಭಾರತ ತನ್ನ ರಾಯಭಾರ ಯತ್ನದಲ್ಲಿ ಮಹತ್ವದ ಯಶ ಸಾಧಿಸಿದಂತಾಗಿದೆ.

ADVERTISEMENT

ದೇವಿಕಾರಾಣಿ ನಿಧನ

ಬೆಂಗಳೂರು, ಮಾ. 9– ಭಾರತೀಯ ಚಲನಚಿತ್ರ ರಂಗದ ಸರ್ವ ಶ್ರೇಷ್ಠ ಅಭಿನೇತ್ರಿ, ಟಾಕಿ ಚಿತ್ರದ ಮೊಟ್ಟ ಮೊದಲ ನಾಯಕ ನಟಿ ಹಾಗೂ ಪ್ರಥಮ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ವಿಜೇತೆ ದೇವಿಕಾರಾಣಿ ರೋರಿಚ್ ಇಂದು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮಿದುಳಿನ ರಕ್ತಸ್ರಾವದಿಂದ ನಿಧನರಾದರು.

ಅವರಿಗೆ 86 ವರ್ಷ ವಯಸ್ಸಾಗಿತ್ತು. ಉಸಿರಾಟದ ತೊಂದರೆಯಿಂದ ಕಳೆದ 24 ರಂದು ನಗರದ ಅಪೊಲೋ ಆಸ್ಪತ್ರೆ ಸೇರಿದ್ದ ಅವರು, ನಿನ್ನೆ ರಾತ್ರಿ ಮಿದುಳಿನ ರಕ್ತಸ್ರಾವಕ್ಕೊಳಗಾಗಿ ಬೆಳಗಿನ ಜಾವ 3.45ಕ್ಕೆ ಕೊನೆಯುಸಿರೆಳೆದರು ಎಂದು ಹದಿನಾಲ್ಕು ವರ್ಷಗಳಿಂದ ದೇವಿಕಾರಾಣಿಯವರ ಆಪ್ತ ವೈದ್ಯರಾಗಿದ್ದ ರಮಣ್‌ರಾವ್ ತಿಳಿಸಿದರು.

ಗ್ಯಾಟ್‌ನಿಂದ ರಾಷ್ಟ್ರ ಹಿತಕ್ಕೆ ಧಕ್ಕೆ–ಹೆಗಡೆ

ಬೆಂಗಳೂರು, ಮಾ. 9– ‘ಡಂಕೆಲ್ ಪ್ರಸ್ತಾವ – ಗ್ಯಾಟ್ ಒಪ್ಪಂದ ಎಂಬುದು ಪಾಶ್ಚಾತ್ಯ ರಾಷ್ಟ್ರಗಳು ಅಸಹಾಯಕ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಶೋಷಣೆ ಮಾಡುವ ಪಿತೂರಿ’ ಎಂದು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಇಂದು ಇಲ್ಲಿ ಬಣ್ಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.