ADVERTISEMENT

25 ವರ್ಷಗಳ ಹಿಂದೆ: ಶುಕ್ರವಾರ 31.1.1997

​ಪ್ರಜಾವಾಣಿ ವಾರ್ತೆ
Published 30 ಜನವರಿ 2022, 19:31 IST
Last Updated 30 ಜನವರಿ 2022, 19:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಕೇಂದ್ರ ನೌಕರರ ವೇತನ, ನಿವೃತ್ತಿ ವಯಸ್ಸು ಏರಿಕೆಗೆ ಶಿಫಾರಸು

ನವದೆಹಲಿ, ಜ. 30 (ಯುಎನ್ಐ)– ಕೇಂದ್ರ ಸರ್ಕಾರಿ ನೌಕರರ ಮೂಲವೇತನ ಶ್ರೇಣಿಗಳ ಏರಿಕೆ, ವಾರಕ್ಕೆ ಆರು ದಿನಗಳ ಕೆಲಸದ ಮರುಜಾರಿ, ಮನೆ ಬಾಡಿಗೆ ಭತ್ಯೆಗಳಲ್ಲಿ ಏರಿಕೆ ಹಾಗೂ 58ರಿಂದ 60ಕ್ಕೆ ನಿವೃತ್ತಿ ವಯಸ್ಸು ಏರಿಕೆ (ಸಶಸ್ತ್ರ ಪಡೆ ಹಾಗೂ ಕೇಂದ್ರೀಯ ಪೊಲೀಸ್ ಅಧಿಕಾರಿಗಳನ್ನು ಹೊರತುಪಡಿಸಿ)– ಇವು ತನ್ನ ಸಮಗ್ರ ವರದಿಯಲ್ಲಿ ಐದನೇ ವೇತನ ಆಯೋಗ ಮಾಡಿರುವ ಶಿಫಾರಸುಗಳು.

ಆಯೋಗದ ಎಲ್ಲಾ ಶಿಫಾರಸುಗಳನ್ನೂ ಅಂಗೀಕರಿಸಿದಲ್ಲಿ ಬೊಕ್ಕಸಕ್ಕೆ ವಾರ್ಷಿಕ 7,300 ಕೋಟಿ ರೂಪಾಯಿಗಳ ಹೊರೆ ಬೀಳಲಿದೆ. ಆಯೋಗದ ಶಿಫಾರಸುಗಳ ಪೂರ್ವಾನ್ವಯ ಜಾರಿಯ ಪರಿಣಾಮವನ್ನೂ ಗಣನೆಗೆ ತೆಗೆದುಕೊಂಡಲ್ಲಿ 1997–98ರ ಹಣಕಾಸು ವರ್ಷದಲ್ಲಿ 1,15,000 ಕೋಟಿ ರೂಪಾಯಿಗಳ ಹೊರೆ ಬೀಳಲಿದೆ.

ADVERTISEMENT

ರೇವಣಸಿದ್ದಯ್ಯ ನೇತೃತ್ವದಲ್ಲಿ ಬೊಪೋರ್ಸ್ ತನಿಖೆಗೆ ತಂಡ

ನವದೆಹಲಿ, ಜ. 30 (ಯುಎನ್ಐ)– ಬೊಪೋರ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಈಚೆಗೆ ಸ್ವಿಸ್ ಬ್ಯಾಂಕ್‌ನಿಂದ ಪಡೆದ ರಹಸ್ಯ ದಾಖಲೆ ಪರಿಶೀಲನೆಯೂ ಸೇರಿದಂತೆ ಹಗರಣದ ಬಗ್ಗೆ ಸಮಗ್ರ ತನಿಖೆ ನಡೆಸಲು ಸಿಬಿಐನ ಹೆಚ್ಚುವರಿ ನಿರ್ದೇಶಕ ಎನ್. ರೇವಣಸಿದ್ದಯ್ಯ ನೇತೃತ್ವದ 12 ಮಂದಿ ಸದಸ್ಯರ ವಿಶೇಷ ತನಿಖಾ ತಂಡವನ್ನು ನೇಮಿಸಲಾಗಿದೆ.

ಒಬ್ಬರು ಜಂಟಿ ನಿರ್ದೇಶಕರು, ಇಬ್ಬರು ಡಿಎಸ್ಪಿಗಳು ಕೂಡಾ ವಿಶೇಷ ತನಿಖಾ ತಂಡದಲ್ಲಿರುತ್ತಾರೆ ಎಂದು ಸಿಬಿಐನ ವಕ್ತಾರ ಎಸ್‌.ಎಂ. ಖಾನ್ ಇಂದು ಇಲ್ಲಿ ಪ್ರಕಟಿಸಿದರು. ಆದರೆ, ತಂಡದಲ್ಲಿರುವ ಇತರ ಸದಸ್ಯರ ಹೆಸರುಗಳನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದರು. ಜೊತೆಗೆ ತನಿಖಾ ತಂಡಕ್ಕೆ ವರದಿ ಸಲ್ಲಿಸಲು ಗಡುವು ನೀಡಲಾಗಿದೆಯೇ ಎಂಬ ಪ್ರಶ್ನೆಗೂ ಅವರು ಉತ್ತರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.