ADVERTISEMENT

25 ವರ್ಷಗಳ ಹಿಂದೆ: ವಿಶ್ವಾಸಮತ ಎದುರಿಸದೇ ನಿತೀಶ್‌ ಪದತ್ಯಾಗ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 23:30 IST
Last Updated 10 ಮಾರ್ಚ್ 2025, 23:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಪಟ್ನಾ, ಮಾರ್ಚ್‌ 10– ವಿಧಾನಸಭೆಯಲ್ಲಿ ವಿಶ್ವಾಸಮತ ಎದುರಿಸದೆಯೇ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಇಂದು ರಾಜೀನಾಮೆ ನೀಡಿದರು.

ಇದರೊಂದಿಗೆ, ಬಿಹಾರವನ್ನು 10 ವರ್ಷಗಳ ಕಾಲ ಆಳಿದ ಲಾಲೂ ಪ್ರಸಾದ್‌ ಅವರ ನಾಯಕತ್ವದ ಪಕ್ಷ ಮೂರನೇ ಬಾರಿಗೆ ಈ ರಾಜ್ಯದ ಚುಕ್ಕಾಣಿ ಹಿಡಿಯುವಂತೆ ಆಗಿದೆ. ಮುಂದಿನ ಸರ್ಕಾರ ರಚನೆಯಾಗುವವರೆಗೆ ಅಧಿಕಾರದಲ್ಲಿ ಮುಂದುವರಿಯಲು ನಿತೀಶ್‌ ಕುಮಾರ್‌ ಅವರಿಗೆ ಸೂಚಿಸಲಾಗಿದೆ.

ಸೋಲು ಕಟ್ಟಿಟ್ಟದ್ದು ಎಂಬುದು ಖಚಿತವಾಗಿರುವುದರಿಂದಲೇ ನಿತೀಶ್‌ ಅವರು ವಿಶ್ವಾಸಮತ ಗೊತ್ತುವಳಿ ಮೇಲಿನ ಚರ್ಚೆಗೆ ಉತ್ತರ ನೀಡಿದರೂ, ಮತದಾನಕ್ಕೆ ಕಾಯದೆ ತಮ್ಮ ಭಾಷಣದಲ್ಲಿ ಆರ್‌ಜೆಡಿ ಹಾಗೂ ಕಾಂಗ್ರೆಸ್‌ ಪಕ್ಷಗಳನ್ನು ಟೀಕಿಸಿ, ತಾವು ರಾಜೀನಾಮೆ ಸಲ್ಲಿಸಲು ರಾಜಭವನಕ್ಕೆ ಹೋಗುತ್ತಿರುವುದಾಗಿ ಪ್ರಕಟಿಸಿದರು.

ADVERTISEMENT

ಕೃಷ್ಣ ದಿಢೀರ್‌ ದೆಹಲಿಗೆ: ಭೇಟಿ ಗೋಪ್ಯ

ನವದೆಹಲಿ, ಮಾರ್ಚ್‌ 10– ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆಗಾಗಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಡನೆ ಚರ್ಚಿಸಲು ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು ಇಂದು ರಾತ್ರಿ ದೆಹಲಿಗೆ ದಿಢೀರನೆ ಆಗಮಿಸಿದರು.

ಆದರೆ ಅವರು ತಮ್ಮ ಈ ಭೇಟಿಯನ್ನು ಗೋಪ್ಯವಾಗಿಟ್ಟಿದ್ದಾರೆ. ದೆಹಲಿಗೆ ಆಗಮಿಸಿರುವ ಮುಖ್ಯಮಂತ್ರಿ ಕರ್ನಾಟಕ ಭವನದಲ್ಲಿ ಉಳಿದುಕೊಂಡಿಲ್ಲ. ಅವರು ಎಲ್ಲಿ ಉಳಿದು ಕೊಂಡಿದ್ದಾರೆಂಬ ಬಗ್ಗೆ ತಮಗೆ ಮಾಹಿತಿ ಇಲ್ಲವೆಂದು ಇಲ್ಲಿನ ಕರ್ನಾಟಕ ಭವನದ ಮತ್ತು ಮುಖ್ಯಮಂತ್ರಿ ಅವರ ಬೆಂಗಳೂರು ಕಾರ್ಯಾಲಯದ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.