ADVERTISEMENT

25 ವರ್ಷಗಳ ಹಿಂದೆ: ಮಂಗಳವಾರ, ಜೂನ್ 10, 1997

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 19:30 IST
Last Updated 9 ಜೂನ್ 2022, 19:30 IST
   

ಕಂಠೀರವ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ದಾಂಧಲೆ ಗೋಪಾಲಕೃಷ್ಣ ಹೆಗಡೆ
ಬೆಂಗಳೂರು, ಜೂನ್‌ 9–
ರಾಷ್ಟ್ರೀಯ ಕ್ರೀಡೆಗಳ ಆರಂಭೋತ್ಸವದ ಕಹಿ ನೆನಪು ಮಾಸುವ ಮೊದಲೇ ಇನ್ನೊಂದು ಅಹಿತಕರ ಘಟನೆ ರಾಜ್ಯ ಕ್ರೀಡಾರಂಗಕ್ಕೆ ಮಸಿ ಬಳಿಯಿತು. ಕಂಠೀರವ ಕ್ರೀಡಾಂಗಣದಲ್ಲಿ ಇಂದು ರಾತ್ರಿ ಕರ್ನಾಟಕ ರಿಲೆ ತಂಡದ ಅನರ್ಹತೆಯನ್ನು ಸಹಿಸದ ಪ್ರೇಕ್ಷಕರು ಕುರ್ಚಿ ಎಸೆದು ಗಲಾಟೆ ಮಾಡಿದರು. ಕುರ್ಚಿ ಎಸೆತದಿಂದ ಚಂಡೀಗಢದ ಅಥ್ಲೀಟ್‌ ಒಬ್ಬಳು ಗಾಯಗೊಂಡಳು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಪ್ರೇಕ್ಷಕರು ರಾಜ್ಯಕ್ಕೆ ಕೆಟ್ಟ ಹೆಸರು ತಂದಂತಯೇ ಅಥ್ಲೆಟಿಕ್ಸ್‌ ಪ್ರೇಕ್ಷಕರು ಕ್ರೀಡಾಮನೋಭಾವಕ್ಕೆ ವಿರುದ್ಧವಾಗಿ ವರ್ತಿಸಿದರು. ನಿಯಮವನ್ನು ಅರ್ಥ ಮಾಡಿಕೊಳ್ಳುವ ಯತ್ನ ಮಾಡದ ಅವರು ಕರ್ನಾಟಕ ಓಡಬೇಕೆನ್ನುವ ಒಂದೇ ಒಂದು ಸ್ವಾರ್ಥದಿಂದ ಆತಿಥೇಯರಿಗೇ ಕಳಂಕ ತಂದರು. ದಿನದ ಕೊನೆಯ ಸ್ಪರ್ಧೆಯಾಗಿದ್ದ ಮಹಿಳೆಯರ 4*100 ಮೀಟರ್ಸ್‌ ರಿಲೆಯಲ್ಲಿ ನಾಲ್ಕನೇ ಸಾಲಿನಲ್ಲಿದ್ದ ಕರ್ನಾಟಕ ತಂಡದ ಮೊದಲ ಓಟಗಾರ್ತಿ ಸುಮನಾ ಎರಡು ತಪ್ಪುಗಳನ್ನೆಸಗಿದ್ದರಿಂದ ತಂಡವನ್ನು ಅನರ್ಹಗೊಳಿಸಲಾಯಿತು. ಕರ್ನಾಟಕ ಓಟಗಾರ್ತಿಯರು ಟ್ರ್ಯಾಕ್‌ನಿಂದ ಹೊರಬಂದರು. ಸ್ಪರ್ಧೆ ಇನ್ನೇನು ಆರಂಭವಾಗುವುದೆನ್ನುವುದರಲ್ಲಿ ಕ್ರೀಡಾಂಗಣದ ಮುಖ್ಯದ್ವಾರದ ಮೇಲ್ಭಾಗದ ಪ್ರೇಕ್ಷಕರು ಕುರ್ಚಿಗಳನ್ನೆಸೆಯತೊಡಗಿದರು. ಕೆಳಗಿದ್ದ ಜನ ಗಾಬರಿಯಿಂದ ಚಲ್ಲಾಪಿಲ್ಲಿಯಾಗಿ ಓಡತೊಡಗಿದರು. ಪೊಲೀಸರು ಮೇಲೆ ಹೋಗುವುದರೊಂದಿಗೆ ಕುರ್ಚಿ ಎಸೆತ ನಿಂತಿತು.

ದಳ ಅಧ್ಯಕ್ಷತೆ: ಆತ್ಮಸಾಕ್ಷಿ ಮತಕ್ಕೆ ಸಂಪುಟ ಮನವಿ

ADVERTISEMENT

ಬೆಂಗಳೂರು, ಜೂನ್‌ 9– ಜನತಾ ದಳದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸುವಂತೆ ಇಂದು ಇಲ್ಲಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್‌ ನೇತೃತ್ವದಲ್ಲಿ ನಡೆದ ಮಂತ್ರಿ ಮಂಡಲ ಸಭೆಯು ತೆಗೆದುಕೊಂಡ ನಿರ್ಣಯದಲ್ಲಿ ಮತದಾರರಲ್ಲಿ ಮನವಿ ಮಾಡಿಕೊಂಡಿದೆ.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಹಾಲಿ ಅಧ್ಯಕ್ಷ ಲಾಲೂ ಪ್ರಸಾದ್‌ ಯಾದವ್‌ ಹಾಗೂ ಕಾರ್ಯಾಧ್ಯಕ್ಷ ಶರದ್‌ ಯಾದವ್‌ ಅವರ ನಡುವಿನ ಸ್ಪರ್ಧೆಯಲ್ಲಿ ಬಹಿರಂಗವಾಗಿ ಯಾರ ಪರ ಅಥವಾ ವಿರೋಧವಾಗಿ ಪ್ರಚಾರದಲ್ಲಿ ತೊಡಗಬಾರದು ಎಂದೂ ನಿರ್ಣಯ ತೆಗೆದುಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.