ADVERTISEMENT

ಶುಕ್ರವಾರ, 31–1–1969

​ಪ್ರಜಾವಾಣಿ ವಾರ್ತೆ
Published 30 ಜನವರಿ 2019, 20:15 IST
Last Updated 30 ಜನವರಿ 2019, 20:15 IST

ಅಣ್ಣಾದೊರೆ ದೇಹಸ್ಥಿತಿ ಈಗ ಸ್ವಲ್ಪ ಉತ್ತಮ

ಮದರಾಸು, ಜ. 30– ಸಾವಿನೊಡನೆ ಸೆಣಸುತ್ತಿರುವ ತಮಿಳುನಾಡಿನ ಮುಖ್ಯಮಂತ್ರಿ ಅಣ್ಣಾದೊರೆ ಚೇತರಿಸಿಕೊಳ್ಳುತ್ತಿರುವರಲ್ಲದೆ, ನೀಡುತ್ತಿರುವ ಚಿಕಿತ್ಸೆಗೆ ಅವರಲ್ಲಿ ಉತ್ತಮ ಪ್ರತಿಕ್ರಿಯೆ ಕಂಡು ಬರುತ್ತಿರುವುದೆಂದು ಗುರುವಾರ ಮಧ್ಯರಾತ್ರಿ ಹೊರಬಿದ್ದ ವೈದ್ಯರ ಪ್ರಕಟಣೆ ತಿಳಿಸಿದೆ.

‘ಅಣ್ಣಾ’ ಪ್ರಾಣ ಉಳಿಸಲು ವೈದ್ಯರು ಎಲ್ಲ ಬಗೆಯ ವೈದ್ಯಕೀಯ ತಂತ್ರ ಬಳಸುತ್ತಿದ್ದಾರೆ.

ADVERTISEMENT

ಗುರುವಾರ ಸಂಜೆ 5.30 ಗಂಟೆಯಲ್ಲಿ ಅಣ್ಣಾದೊರೆಯವರ ದೇಹ ಸ್ಥಿತಿ ಮತ್ತೆ ವಿಷಮಿಸಿತ್ತು.

ಭಾರತದಿಂದ ಶಸ್ತ್ರಾಸ್ತ್ರ ಕೇಳಿಲ್ಲ: ಗಡಿನಾಡು ಗಾಂಧಿ

ನವದೆಹಲಿ, ಜ. 30– ಪಕ್ತೂನಿಸ್ತಾನ್ ಸ್ವಾತಂತ್ರ್ಯ ಹೋರಾಟಕ್ಕಾಗಿ ಭಾರತ ಬಾಂಬರ್ ಮತ್ತು ಯುದ್ಧ ವಿಮಾನಗಳನ್ನು ನೀಡಬೇಕೆಂದು ತಾವು ಭಾರತದ ಸಂಸತ್ ಸದಸ್ಯರೊಬ್ಬರಿಗೆ ತಿಳಿಸಿರುವುದಾಗಿ ಪಾಕಿಸ್ತಾನದ ವಿದೇಶಾಂಗ ಮಂತ್ರಿ ಆರ್ಷದ್ ಹುಸೇನ್ ಅವರು ಇತ್ತೀಚೆಗೆ ನೀಡಿರುವ ಹೇಳಿಕೆಯನ್ನು ಖಾನ್ ಅಬ್ದುಲ್ ಗಫಾರ್‌ಖಾನ್ ಅವರು ನಿರಾಕರಿಸಿದ್ದಾರೆ.

‘ಯುದ್ಧ ವಿಮಾನ ಮತ್ತು ಮದ್ದು ಗುಂಡು ಸರಬರಾಜು ಮಾಡುವಂತೆ ನಾನು ಎಂದೂ ಭಾರತ ಸರ್ಕಾರವನ್ನು ಕೇಳಿಲ್ಲ. ನನ್ನ ಜೀವನದ ತತ್ವ ಎಲ್ಲರಿಗೂ ಗೊತ್ತಿದೆ. ನಾನು ಅಹಿಂಸಾವಾದಿ. ಪಾಕಿಸ್ತಾನದ ಜನರ ಮನಸ್ಸನ್ನು ಬೇರೆ ಕಡೆ ಸೆಳೆಯಲು ಪಾಕ್ ಸರ್ಕಾರ ಹೂಡಿರುವ ಪ್ರಚಾರ ತಂತ್ರ’ ಎಂದು ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಮೃತ್ಯುವಿನ ಮುನ್ಸೂಚನೆ ಕಂಡಿದ್ದ ಮಹಾತ್ಮ

ಲಂಡನ್, ಜ. 30– ಗಾಂಧೀಜಿಯವರಿಗೆ ತಮ್ಮ ಸಾವು ಹೇಗೆ ಬರಬಹುದೆಂದು ಮೊದಲೇ ತಿಳಿದಿತ್ತು.

ಅವರ ಹತ್ಯೆಗೆ ಹತ್ತು ದಿನಗಳ ಮುಂಚೆ ಬಾಂಬೊಂದರಿಂದ ಅವರು ಪಾರಾಗಿದ್ದರು. ಶ್ರೀಮತಿ ಮೌಂಟ್ ಬೇಟನ್ ಆ ಸಂದರ್ಭದಲ್ಲಿ ಅವರನ್ನು ಅಭಿನಂದಿಸಿದಾಗ ಗಾಂಧಿಯವರು ಮೃದುವಾಗಿ ‘ಯಾರಾದರೂ ನೇರ ನನ್ನತ್ತ ಗುಂಡು ಹಾರಿಸಿದಾಗ ಮನಸ್ಸಿನಲ್ಲಿ ನಾನು ದೇವರ ಧ್ಯಾನ ಮಾಡುತ್ತಾ ಗುಂಡನ್ನು ನಗುಮುಖದಿಂದ ಎದುರಿಸಿದರೆ ನಾನು ಅಭಿನಂದನಾರ್ಹ’ ಎಂದು ಹೇಳಿದರು.

ಈ ಪ್ರಸಂಗವನ್ನು ಲಾರ್ಡ್ ಮೌಂಟ್ ಬೇಟನ್ ಅವರು ಸೇಂಟ್ ಪಾಲ್ಸ್ ಕೆಥಡ್ರಲ್‌ನಲ್ಲಿ ನಡೆದ ಗಾಂಧಿ ಸ್ಮಾರಕ ಪ್ರಾರ್ಥನಾ ಸಭೆಯಲ್ಲಿ ಇಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.