ADVERTISEMENT

50 ವರ್ಷಗಳ ಹಿಂದೆ: ಮಂಗಳವಾರ, 26-09-1972

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2022, 20:43 IST
Last Updated 25 ಸೆಪ್ಟೆಂಬರ್ 2022, 20:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭದ್ರಾವತಿ ಕಾರ್ಖಾನೆ ಲಾಕ್‌ಔಟ್‌ ತೆರವು

ಬೆಂಗಳೂರು, ಸೆ. 25 – ಇಂದು ಕಾರ್ಮಿಕ ಸಚಿವ ಶ್ರೀ ಅಜೀಜ್‌ ಸೇಠ್‌ ಅವರ ನೇತೃತ್ವದಲ್ಲಿ ನಡೆದ ತ್ರಿಪಕ್ಷ ಸಮ್ಮೇಳನದಲ್ಲಿ ಆದ ಒಪ್ಪಂದ ರೀತ್ಯಾ, ಭದ್ರಾವತಿ ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆಯ ಆಡಳಿತ ತತ್‌ಕ್ಷಣದಿಂದ ಲಾಕ್‌ಔಟ್ ತೆಗೆಯಲು ಒಪ್ಪಿದೆ. ಬುಧವಾರದಿಂದ ಕೆಲಸಗಾರರು ಕೆಲಸಕ್ಕೆ ಹಿಂದಿರುಗಲಿದ್ದಾರೆ.

ತ್ರಿಪಕ್ಷ ಸಮ್ಮೇಳನದಲ್ಲಿ ಕಾರ್ಖಾನೆಯ ಎರಡು ಕಾರ್ಮಿಕ ಸಂಘಗಳ ಪ್ರತಿನಿಧಿಗಳೂ ಹಾಜರಿದ್ದು, ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. 19ರಂದು ಕಾರ್ಖಾನೆಯ ಲಾಕ್‌ಔಟನ್ನು ಘೋಷಿಸಲಾಗಿದ್ದು, ಪ್ರತಿದಿನ 12 ಲಕ್ಷ ರೂಪಾಯಿಗಳಷ್ಟು ನಷ್ಟವಾಗುತ್ತಿತ್ತು.

ADVERTISEMENT

ಪ್ರಭಾವ ಬೀರಲು ಇಥಿಯೋಪಿಯಾಕ್ಕೆ ರಾಷ್ಟ್ರಪತಿ ಗಿರಿ ಕರೆ

ಅಡೀಸ್‌ ಅಬಾಬ, ಸೆ. 25– ಉಗಾಂಡದಲ್ಲಿನ ಏಷ್ಯನ್ ಸಂಜಾತರ ಸಮಸ್ಯೆ ಪರಿಹರಿಸಲು ಪ್ರಭಾವ ಬೀರುವಂತೆ ರಾಷ್ಟ್ರಪತಿ ವಿ.ವಿ.ಗಿರಿಯವರು ಇಂದು ಇಲ್ಲಿ ಇಥಿಯೋಪಿಯಾ ಚಕ್ರವರ್ತಿ ಹೈಲಿ ಸಲಾಸಿಯವರಿಗೆ ಮನವಿ ಮಾಡಿದರು.

ರಾಷ್ಟ್ರಪತಿ ಗಿರಿಯವರು ಚಕ್ರವರ್ತಿ ಹೈಲಿ ಸಲಾಸಿಯವರ ಜೊತೆ ಇಂದು ಮಾತುಕತೆ ನಡೆಸಿದಾಗ ಈ ಮನವಿ ಮಾಡಿದರೆಂದು ವರದಿಯಾಗಿದೆ. ಪ್ರತೀ ರಾಷ್ಟ್ರಕ್ಕೂ ವಿದೇಶಿಯರ ಬಗ್ಗೆ ತನ್ನದೇ ಆದ ರೀತಿಯಲ್ಲಿ ವರ್ತಿಸುವ ಹಕ್ಕಿದೆ ಎಂದು ಚಕ್ರವರ್ತಿಯವರಿಗೆ ತಿಳಿಸಿದ ಗಿರಿಯವರು, ಉಗಾಂಡದಲ್ಲಿನ ಏಷ್ಯನ್ನರ ಬಗ್ಗೆ ಮಾನವೀಯ ವರ್ತನೆ ಅಗತ್ಯ. ಏಷ್ಯನ್ನರು ಘನತೆ, ಗೌರವಗಳಿಂದ ಉಗಾಂಡ ತ್ಯಜಿಸಲು ಅವಕಾಶ ಮಾಡಿಕೊಡಬೇಕೆಂದು ಹೇಳಿದರೆಂದು ತಿಳಿದುಬಂದಿದೆ.

ಉಗಾಂಡದಿಂದ ಉಚ್ಚಾಟಿಸಲ್ಪಟ್ಟ ಭಾರತೀಯರನ್ನು ಕರೆಸಿಕೊಳ್ಳಲು ಭಾರತ ಸಂಪೂರ್ಣ ವ್ಯವಸ್ಥೆ ಮಾಡಿದೆಯೆಂದು ಗಿರಿಯವರು ತಿಳಿಸಿದರೆಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.