ADVERTISEMENT

ಸೋಮವಾರ, 2–6–1969

​ಪ್ರಜಾವಾಣಿ ವಾರ್ತೆ
Published 1 ಜೂನ್ 2019, 18:25 IST
Last Updated 1 ಜೂನ್ 2019, 18:25 IST

ಮೈಸೂರು– ಮಹಾಷ್ಟ್ರ ಗಡಿ ವಿವಾದ: ಪಾಟಸ್ಕರ್ ಸೂತ್ರಕ್ಕೂ, ಪಿ.ಎಸ್.ಪಿ.ಗೂ ಸಂಬಂಧವಿಲ್ಲ– ದ್ವಿವೇದಿ
ಬೆಂಗಳೂರು, ಜೂನ್ 1– ‘ಮೈಸೂರು – ಮಹಾರಾಷ್ಟ್ರ ಗಡಿವಿವಾದ ಪರಿಹಾರಕ್ಕೆ ಪಾಟಸ್ಕರ್ ಅವರು ಸೂಚಿಸಿದ ಸೂತ್ರಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ’ ಎಂದು ಲೋಕಸಭೆಯಲ್ಲಿ ಪಿ.ಎಸ್.ಪಿ. ಗುಂಪಿನ ನಾಯಕರಾಗಿರುವ ಶ್ರೀ ಎಸ್.ಎನ್. ದ್ವಿವೇದಿ ಅವರು ತಮ್ಮ ಪಕ್ಷದ ರಾಷ್ಟ್ರೀಯ ನಾಯಕತ್ವದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಪಾಟಸ್ಕರ್ ಸೂತ್ರವನ್ನು ಬೆಂಬಲಿಸಿ ಪಕ್ಷದ ಅಧ್ಯಕ್ಷ ಶ್ರೀ ಎನ್.ಜಿ. ಗೋರೆಯವರು ಈಚೆಗೆ ಮೈಸೂರಿನಲ್ಲಿ ಮಾಡಿದರೆನ್ನಲಾದ ಹೇಳಿಕೆಯ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಅವರ ಗಮನ ಸೆಳೆದಾಗ ‘ಶ್ರೀ ಗೋರೆಯವರು ಹೇಳಿರುವುದು ಯಾವುದೇ ಗಡಿ ವಿವಾದದ ಪರಿಹಾರಕ್ಕೆ ಒಂದು ರೀತಿಯ ಸೂತ್ರವಿರಬೇಕು ಎಂದು ಮಾತ್ರ’ ಎಂದು ವಿಶದಪಡಿಸಿದರು.

‘ಮಹಾಜನ್ ವರದಿಯನ್ನು ಮೈಸೂರು ಒಪ್ಪಿದೆ, ಮಹಾರಾಷ್ಟ್ರ ಒಪ್ಪುತ್ತಿಲ್ಲ. ಆಯಾ ರಾಜ್ಯದ ಪಿ.ಎಸ್.ಪಿ ಶಾಖೆಗಳೂ ಆಯಾ ರಾಜ್ಯದ ನಿಲುವನ್ನು ಸಮರ್ಥಿಸಿದೆ. ಆದರೆ ಪಿ.ಎಸ್‌.ಪಿ.ಯ ರಾಷ್ಟ್ರೀಯ ನಾಯಕತ್ವ ಪದವಿಯ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ನಿರ್ಧಾರ ಕೈಗೊಳ್ಳಬೇಕಾಗಿರುವುದು ಕೇಂದ್ರ ಸರ್ಕಾರ ಎಂದು ದ್ವಿವೇದಿ ಹೇಳಿದರು.

ADVERTISEMENT

ರಾಷ್ಟ್ರೀಯ ಆರೋಗ್ಯವಿಮಾ ಯೋಜನೆಗೆ ಶ್ರೀ ಗಿರಿ ಕರೆ
ಬೆಂಗಳೂರು, ಜೂನ್ 1– ಎಲ್ಲರಿಗೂ ಅನ್ವಯವಾಗುವ ರಾಷ್ಟ್ರೀಯ ಆರೋಗ್ಯ ವಿಮಾ ಯೋಜನೆಯನ್ನು ಪಡೆಯುವುದರ ಕಡೆಗೆ ಸರ್ವ ಪ್ರಯತ್ನವನ್ನೂ ಕ್ರೋಢೀಕರಿಸಲು ರಾಷ್ಟ್ರಪತಿ ಶ್ರೀ ವಿ.ವಿ. ಗಿರಿ ಅವರು ಇಂದು ಇಲ್ಲಿ ಕರೆಯಿತ್ತರು.

ಮಹಾಬೋಧಿ ಮೈತ್ರಿಮಂಡಲವು ನಗರದ ಪ್ರಮುಖ ಬಡಾವಣೆಯಾದ ಜಯನಗರದಲ್ಲಿ ಸ್ಥಾಪಿಸುವ ‘ಮೈತ್ರಿ ಮೆಡಿಕಲ್ ಮಿಷನ್’ ಜಯನಗರ ಮೆಡಿಕಲ್ ಕೇಂದ್ರ ಮತ್ತು ಚಂದಾ ಆರೋಗ್ಯ ಯೋಜನೆಯನ್ನು ಉದ್ಘಾಟಿಸಿದ ಅವರು ತಾವು 1952ರಲ್ಲಿ ಕೇಂದ್ರದ ಕಾರ್ಮಿಕ ಸಚಿವರಾಗಿದ್ದಾಗ ಕಾರ್ಯಗತವಾದ ನೌಕರರ ರಾಜ್ಯ ವಿಮಾ ಯೋಜನೆಯನ್ನು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.