ADVERTISEMENT

50 ವರ್ಷಗಳ ಹಿಂದೆ: ಗುರುವಾರ 4–3–1971

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 19:30 IST
Last Updated 3 ಮಾರ್ಚ್ 2021, 19:30 IST
   

ಗಾಳಿ ಎಷ್ಟು, ಗಟ್ಟಿ ಮತವೆಷ್ಟು? ಸಾಕ್ಷಾತ್ ಸಮೀಕ್ಷೆ ಸಮಾರೋಪ

(ಎಸ್‌.ವಿ.ಜಯಶೀಲ ರಾವ್‌)

ಬೆಂಗಳೂರು, ಮಾರ್ಚ್ 3– ಲೋಕ ಸಭಾ ಚುನಾವಣೆಯ ಮಹಾ ಕಾಳಗದಲ್ಲಿ ಬೀಸುತ್ತಿರುವ ‘ಇಂದಿರಾ ಗಾಳಿ’ ತನ್ನ ಒಲವಿಗೆ ಸಿಕ್ಕಿರುವ ಮತದಾರರನ್ನು ಸಾಕಷ್ಟು ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಕೊಂಡೊಯ್ದಲ್ಲಿ, ಮೈತ್ರಿಕೂಟದ ಪ್ರಬಲ ಶಕ್ತಿಯನ್ನು ವಿರೋಧಿಸುತ್ತಿರುವ ಆಡಳಿತ ಕಾಂಗ್ರೆಸ್, ಬಹುಮತ ಪಡೆಯುವ ಸಂಭವವಿದೆ.

ADVERTISEMENT

ಆಡಳಿತ ಕಾಂಗ್ರೆಸ್ ಪರ ಎದ್ದಿರುವ ಅಲೆಯನ್ನು, ರಾಜ್ಯದ 27 ಲೋಕಸಭೆ ಕ್ಷೇತ್ರಗಳಲ್ಲಿ ಗುರುವಾರ 13 ಕ್ಷೇತ್ರಗಳಲ್ಲಿ ಮತದಾನ ಆರಂಭವಾಗುವ ಮುನ್ನ ತಡೆದು ಹಿಂದಕ್ಕೆ ತಳ್ಳಲಾಗಿದೆಯೆಂಬ ವಿಶ್ವಾಸ ಹಾಗೂ ಸಮಾಧಾನ ಮೈತ್ರಿಕೂಟಕ್ಕಿದೆ.

ಆಡಳಿತ ಕಾಂಗ್ರೆಸ್ಸಿಗೆ ಬದಲಾಗಿ ಬಹುಮತದ ಜಯ ತಮಗೆ ಲಭಿಸುವುದೆಂದೂ ಮೈತ್ರಿಕೂಟ ಹೇಳುತ್ತಿದೆ.

ನಗರದಲ್ಲೂ ಚಿಲ್ಲರೆಗೆ ಬರ

ಬೆಂಗಳೂರು, ಮಾರ್ಚ್ 3– ‘ದಯವಿಟ್ಟು ಚಿಲ್ಲರೆ ಕೊಡಿ’– ನಗರದ ಅನೇಕ ಅಂಗಡಿಗಳಲ್ಲಿ, ಹೋಟೆಲುಗಳಲ್ಲಿ ಎದ್ದು ಕಾಣುವ ಬೋರ್ಡು ಇದು. ಹಿಂದೊಮ್ಮೆ ಬಂದ ಗಿರಾಕಿಯನ್ನು ಏನೂ ಕೊಳ್ಳದೆ ಹೋಗದಂತೆ ಮಾಡುತ್ತಿದ್ದ ಚಾಕಚಕ್ಯತೆ, ಚಾತುರ್ಯ ಮಾಯ. ಕಾರಣ ಇದ್ದಕ್ಕಿದ್ದಂತೆ ವಹಿವಾಟಿನಿಂದ ಚಿಲ್ಲರೆ ಮಾಯ.

ಅಂಗಡಿ, ಹೋಟೆಲುಗಳ ಗಲ್ಲಾದಲ್ಲಿ ತುಂಬಿರುತ್ತಿದ್ದ ಬಟ್ಟಲುಗಳೆಲ್ಲ ಖಾಲಿ. ಚಿಲ್ಲರೆ ತಂದುಕೊಟ್ಟವರಿಗೆ ಹಲವೆಡೆ ಕಮಿಷನ್ ನೀಡುವಷ್ಟರ ಮಟ್ಟಿಗೆ ಅದರ ಅಭಾವದ ಬಿಸಿ ತಟ್ಟಿದೆ. ಅನೇಕ ಅಂಗಡಿಗಳಲ್ಲಿ ಚಿಲ್ಲರೆ ಇಲ್ಲದೆ ಗುರುತಿನ ಗಿರಾಕಿಗಳಿಗೆ ಚೀಟಿಯಲ್ಲಿ ಅದನ್ನು ಬರೆದು ಕೊಡುವ ಪ್ರವೃತ್ತಿ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.