ADVERTISEMENT

50 ವರ್ಷಗಳ ಹಿಂದೆ: 6-10-1972

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2022, 21:15 IST
Last Updated 5 ಅಕ್ಟೋಬರ್ 2022, 21:15 IST
   

ಹೊಸಕೋಟೆ ಬಳಿ ಮೆಗಾಲಿಥಿಕ್‌ ಸಂಸ್ಕೃತಿಯ ಅವಶೇಷಗಳ ಪತ್ತೆ

ಬೆಂಗಳೂರು, ಅ. 5– ಹೊಸಕೋಟೆ ಬಳಿಯಿರುವ ಅಟ್ಟೂರು ಎನ್ನುವ ಗ್ರಾಮದ ಹತ್ತಿರ (ಬೆಂಗಳೂರಿನಿಂದ ಇಪ್ಪತ್ತೊಂದು ಮೈಲಿಗಳ ದೂರಲ್ಲಿದೆ) ಮೆಗಾಲಿಥಿಕ್‌ ಸಂಸ್ಕೃತಿಗೆ ಸೇರಿದ ಮಡಿಕೆಯ ಚೂರುಗಳು, ಹಳೆಯ ಮೂಳೆಗಳು, ಕಲ್ಲಿನ ಆಯುಧಗಳು ಮತ್ತು ಕಬ್ಬಿಣದ ಗಂಟುಗಳನ್ನು ಪತ್ತೆಹಚ್ಚಲಾಗಿದೆ.

ನೆಲದ ಮೇಲೆ ಎತ್ತರವಾಗಿ ದೊಡ್ಡ ಕಲ್ಲುಗಳಿಂದ ನಿರ್ಮಿಸಿದ ಸಮಾಧಿಗಳು ಮೆಗಾಲಿಥಿಕ್‌ ಸಂಸ್ಕೃತಿಯ ಸೂಚಕ. ಈ ಬಗೆಯ ಸಂಸ್ಕೃತಿ ಕ್ರಿ.ಪೂ. ಮೂರನೇ ಶತಮಾನದಿಂದ ಕ್ರಿ.ಶ. ಒಂದನೇ ಶತಮಾನದವರೆಗೆ ಇತ್ತೆಂದು ತಜ್ಞರು ಊಹಿಸಿದ್ದಾರೆ.

ADVERTISEMENT

ಆರ್ಥಿಕ ಸಹಕಾರ: ಜಪಾನ್‌ ಪ್ರಧಾನಿ ಜತೆ ಚವಾಣ್‌ ಮಾತುಕತೆ

ಟೋಕಿಯೋ, ಅ. 5– ಭಾರತಕ್ಕೆ ಜಪಾನ್‌ ಆರ್ಥಿಕ ನೆರವು ಬಗ್ಗೆ ಪ್ರಧಾನಿ ತನಾಕಾ ಮತ್ತು ಇಲ್ಲಿಗೆ ಭೇಟಿ ನೀಡಿರುವ ಭಾರತದ ಹಣಕಾಸು ಸಚಿವ ವೈ.ಬಿ. ಚವಾಣ್‌ ಅವರ ನಡುವೆ ಮಾತುಕತೆಯಲ್ಲಿ ಪ್ರಸ್ತಾಪವಾಯಿತು.

ಯೆನ್‌ ಸಾಲದ ವಿಸ್ತರಣೆಯೂ ಸೇರಿದಂತೆ ಭಾರತದ ಜತೆ ಆರ್ಥಿಕ ಸಹಕಾರ ವೃದ್ಧಿಗೆ ಮಾರ್ಗಗಳನ್ನು ತಮ್ಮ ಸರ್ಕಾರ ಅಧ್ಯಯನ ನಡೆಸುತ್ತಿದೆ ಎಂದು ತನಾಕಾ ಅವರು ಚವಾಣ್‌ ಅವರಿಗೆ ತಿಳಿಸಿದರು.

ಚವಾಣ್ ಅವರು ಅಂತರರಾಷ್ಟ್ರೀಯ ಆರ್ಥಿಕ ನಿಧಿ ಮತ್ತು ವಿಶ್ವಬ್ಯಾಂಕ್‌ ವಾರ್ಷಿಕ ಸಭೆ ಮುಗಿಸಿಕೊಂಡು ಹಿಂತಿರುಗುವ ಹಾದಿಯಲ್ಲಿ ಇಲ್ಲಿಗೆ ಆಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.