ಬುದ್ಧಿಜೀವಿಗಳ ಮಾರ್ಗದರ್ಶನ: ಇಂದಿರಾ ಆಕಾಂಕ್ಷೆ
ನವದೆಹಲಿ, ಆ. 17– ನಮ್ಮ ಲೇಖಕರು ಹಾಗೂ ಬುದ್ಧಿಜೀವಿಗಳು ಜನತೆಗೆ ನಾಯಕತ್ವ ಒದಗಿಸುವುದರಲ್ಲಿ ಯಶಸ್ವಿಯಾಗಿಲ್ಲ ಎಂಬುದು ಪ್ರಧಾನಿ ಇಂದಿರಾ ಭಾವನೆ.
ಸಾಧಾರಣವಾಗಿ ತತ್‌ಕ್ಷಣದ ಸಮಸ್ಯೆಗಳಷ್ಟೇ ರಾಜಕಾರಣಿಯ ಚಿಂತೆಯಾಗಿರುತ್ತದೆ. ಆದರೆ, ಲೇಖಕ ಅಥವಾ ಕರ್ತೃವಿನ ಚಿಂತನೆ ಇನ್ನೂ ಆಳವಾದದ್ದು, ವ್ಯಾಪಕ, ಮೂಲಭೂತ ರೀತಿಯದು; ಮಾನವನ ಸುಖ–ದುಃಖ, ಶಂಕೆ–ಚಿಂತೆಗಳ ಸುಳಿಯಲ್ಲಿ ಸತತ ಅನ್ವೇಷಣೆ ಅವರದು. ಸಾಮಾಜಿಕ ಜೀವನಕ್ಕೆ ಒಂದು ಅರ್ಥ ಹುಡುಕುವ ಭಾವುಕರು ಅವರು ಎನ್ನುತ್ತಾರೆ ಇಂದಿರಾ.
ಖ್ಯಾತ ಹಿಂದಿ ಲೇಖಕ ಶ್ರೀಕಾಂತ್ ವರ್ಮಾ ಅವರಿಗೆ ಈಚೆಗೆ ಕೊಟ್ಟಸಂದರ್ಶನದಲ್ಲಿ ಶ್ರೀಮತಿ ಇಂದಿರಾ ಗಾಂಧಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಮಹಾಜನ್ ವರದಿ ಜಾರಿಗೆ ಖಡಾಖಂಡಿತ ಒತ್ತಾಯ: ಅನ್ಯಮಾರ್ಗವೇ ಇಲ್ಲ
ಬೆಂಗಳೂರು, ಆ. 17– ‘ಮಹಾಜನ್ ವರದಿ ಕಾರ್ಯಗತ ಮಾಡಬೇಕೆಂಬ ರಾಜ್ಯದ ನಿಲುವನ್ನೇ ಪ್ರತಿಪಾದಿಸಿ’– ಇದು ಇಂದು ಮತ್ತೊಮ್ಮೆ ಸರ್ವ ಪಕ್ಷಗಳ ಪ್ರತಿನಿಧಿಗಳು ಮುಖ್ಯಮಂತ್ರಿಗೆ ನೀಡಿದ ಸೂಚನೆ.
ನಾಳೆ ದೆಹಲಿಯಲ್ಲಿ ಪ್ರಧಾನಿಯೊಡನೆ ಗಡಿ ವಿವಾದ ಕುರಿತು ಚರ್ಚಿಸುವಾಗ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ಈ ನಿಲುವನ್ನೇ ಪ್ರತಿಪಾದಿಸುವರು.
ನಾಳೆ ಬೆಳಿಗ್ಗೆ ದೆಹಲಿಗೆ ತೆರಳುವ ಮುನ್ನ ಮುಖ್ಯಮಂತ್ರಿಗಳು ಇಂದು ಸರ್ವ ಪಕ್ಷಗಳ ಪ್ರತಿನಿಧಿಗಳೊಡನೆ ಸುಮಾರು ಎರಡೂವರೆ ಗಂಟೆಗಳ ಕಾಲ ಸಮಾಲೋಚನೆ ನಡೆಸಿದ ನಂತರ ರಾಜ್ಯದ ನಿಲುವಿನ ಬಗ್ಗೆ ಇದು ಮತ್ತೊಮ್ಮೆ ಸ್ಪಷ್ಟವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.