ಲೋಕಸಭೆಗೆ ಇಂದಿರಾ ಗಾಂಧಿ ಆಯ್ಕೆ ರದ್ದು: ಆರು ವರ್ಷ ಅನರ್ಹತೆ
ಅಲಹಾಬಾದ್, ಜೂನ್ 12– ರಾಯ್ ಬರೇಲಿ ಕ್ಷೇತ್ರದಿಂದ ಲೋಕಸಭೆಗೆ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರ ಆಯ್ಕೆಯನ್ನು ಅಲಹಾಬಾದ್ ಹೈಕೋರ್ಟ್ ರದ್ದುಪಡಿಸಿದೆ. ತೀರ್ಪಿನ ಅನುಷ್ಠಾನಕ್ಕೆ ಇಪ್ಪತ್ತು ದಿನಗಳ ತಡೆಯಾಜ್ಞೆಯನ್ನೂ ನೀಡಲಾಗಿದೆ.
ಇಂದಿರಾ ಗಾಂಧಿ ಅವರ ಆಯ್ಕೆ ಪ್ರಶ್ನಿಸಿ ರಾಜನಾರಾಯಣ್ ಅವರು ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿ ಮೇಲೆ ಇಂದು ನ್ಯಾಯಮೂರ್ತಿ ಸಿನ್ಹಾ ಅವರು ತೀರ್ಪು ನೀಡಿದರು.
ಚುನಾವಣೆಯಲ್ಲಿ ಭ್ರಷ್ಟ ಮಾರ್ಗ ಅನುಸರಿಸಲಾಗಿದೆ ಎಂಬ ಆಪಾದನೆಯನ್ನು ಎತ್ತಿ ಹಿಡಿದಿರುವ ನ್ಯಾಯಮೂರ್ತಿ, ಆರು ವರ್ಷಗಳ ಕಾಲ ಇಂದಿರಾ ಗಾಂಧಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರೆಂದು ಘೋಷಿಸಿದ್ದಾರೆ.
ಎಲ್ಲ ಕಡೆ ಜನತಾ ರಂಗದ ಮೇಲುಗೈ
ಅಹಮದಾಬಾದ್, ಜೂನ್ 12– ಗುಜರಾತ್ ವಿಧಾನಸಭೆಯ ಫಲಿತಾಂಶಗಳು ಹೊರ ಬೀಳುತ್ತಿದ್ದಂತೆ ಜನತಾ ರಂಗ ಮೇಲುಗೈ ಹೊಂದಿರುವುದು ಸ್ಪಷ್ಟವಾಯಿತು.
ಪ್ರಕಟವಾದ ಒಟ್ಟು 42 ಸ್ಥಾನಗಳಲ್ಲಿ ಐದು ಪಕ್ಷಗಳನ್ನು ಒಳಗೊಂಡ ಜನತಾ ರಂಗವು ಒಟ್ಟು 32 ಸ್ಥಾನಗಳನ್ನು ಗಿಟ್ಟಿಸಿಕೊಂಡಿತು. ಕಾಂಗ್ರೆಸ್ಸಿಗೆ ಕೇವಲ 9 ಸ್ಥಾನಗಳು ಲಭಿಸಿವೆ. ಪಕ್ಷೇತರರೊಬ್ಬರು ಜಯಗಳಿಸಿದ್ದಾರೆ.
ಎಣಿಕೆ ನಡೆಯುತ್ತಿರುವ ಎಲ್ಲ ಕ್ಷೇತ್ರಗಳಲ್ಲೂ ಜನತಾ ರಂಗವು ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ಸಿಗಿಂತ ಮುಂದಿದೆ. ಆಯ್ಕೆಗೊಂಡ ಜನತಾ ರಂಗ ಅಭ್ಯರ್ಥಿಗಳಲ್ಲೂ ಸಂಸ್ಥಾ ಕಾಂಗ್ರೆಸ್ಸಿನದೇ ಮೇಲುಗೈ. ಆನಂತರದ ಸ್ಥಾನ ಜನಸಂಘಕ್ಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.