ದುರ್ಬಲರಿಗೆ ರಾಜ್ಯಾಂಗದತ್ತ ಹಕ್ಕುಗಳು ಇನ್ನೂ ದೊರಕಿಲ್ಲ
ಬೆಂಗಳೂರು, ಜುಲೈ 28– ರಾಜ್ಯಾಂಗವು ದುರ್ಬಲ ವರ್ಗಗಳಿಗೆ ನೀಡಿರುವ ಹಕ್ಕು ಬಾಧ್ಯತೆಗಳು ಇನ್ನೂ ಪೂರ್ಣವಾಗಿ ಈಡೇರಿಲ್ಲವೆಂದು ಕಾನೂನು ಸಚಿವ ಶ್ರೀ ಡಿ.ಕೆ. ನಾಯ್ಕರ್ ಅವರು ಇಂದು ಇಲ್ಲಿ ವಿಷಾದಿಸಿ, ‘ರಾಜ್ಯಾಂಗದಲ್ಲಿ ಇರುವುದು ಒಂದಾದರೆ ನಾವು ನಡೆದುಕೊಂಡಿರುವುದು ಇನ್ನೊಂದಾಗಿದೆ’ ಎಂದರು.
ಅಖಿಲ ಕರ್ನಾಟಕ ಗಾಣಿಗರ ಪ್ರಥಮ ಸಮ್ಮೇಳನವನ್ನು ಪುರಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
‘ಹಿಂದುಳಿದಿರುವಿಕೆಯನ್ನು ನಿರ್ಧರಿಸಲು 1,300 ರೂ.ಗಳ ವಾರ್ಷಿಕ ಆದಾಯ ಮಿತಿ ಸೂತ್ರ ಅನುಸರಿಸಿದುದರಿಂದ ಹಿಂದುಳಿದ ವರ್ಗಗಳಿಗೆ ಮೀಸಲಾದ ಸೌಲಭ್ಯಗಳು ನಿಜವಾಗಿ ಸಲ್ಲಬೇಕಾದವರಿಗೆ ಸಲ್ಲಲಿಲ್ಲ’ ಎಂದು ಹೇಳಿದರು.
ಸತ್ತವನು ಎದ್ದ; ಎದೆಯೊಡೆದು ಸತ್ತ
ಕಾರಕಾಸ್, ಜುಲೈ 28– ವೆನಿಜುವೆಲಾದ ಬೆಸ್ತನೊಬ್ಬ ಶನಿವಾರ ಸತ್ತಾಗ ಬಂಧು ಬಳಗದವರೆಲ್ಲಾ ಅತ್ತುಕರೆದು, ಅವನನ್ನು ಶವಪೆಟ್ಟಿಗೆಯಲ್ಲಿ ಮಲಗಿಸಿ ಅಂತಿಮ ಸಂಸ್ಕಾರಕ್ಕೆ ಸಿದ್ಧರಾದರು. ಆದರೆ ಅವನು ಎದ್ದು ಕುಳಿತ. ಮೂಗಿನ ಹೊಳ್ಳೆಗಳಿಗೆ ಸಿಕ್ಕಿಸಿದ್ದ ಅರಳೆಯುಂಡೆಗಳನ್ನು ಕಿತ್ತುಹಾಕಿದ. ತನ್ನ ಅಂತಿಮಸಂಸ್ಕಾರಕ್ಕೆ ಸಿದ್ಧತೆ ನಡೆದಿರುವುದು ಅವನ ಗಮನಕ್ಕೆ ಬಂತು. ತತ್‌ಕ್ಷಣ ಹೃದಯ ಸ್ತಂಭನವಾಗಿ ಸತ್ತ!
ಆತ ಸತ್ತಿರುವನೆಂದು ಘೋಷಿಸಿ ಇಷ್ಟೆಲ್ಲಾ ಅನಾಹುತಕ್ಕೆ ಕಾರಣನಾದ ವೈದ್ಯನ ಮೇಲೆ ಕ್ರಮ ಜರುಗಿಸಲು ಸತ್ತವನ ಬಂಧು ಬಾಂಧವರಲ್ಲಿ ಕೆಲವರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.