ನಾಗಾ ದಂಗೆಕೋರರ ಅಧಿಕ ಹಿಂಸಾಚಾರದ ವಿರುದ್ಧ ಬಿರುಸು ಕ್ರಮ
ನವದೆಹಲಿ, ಆ. 1– ನಾಗಾಲ್ಯಾಂಡ್ ಅಥವಾ ಮಿಜೋರಾಂಗೆ ಸ್ವತಂತ್ರ ಸ್ಥಾನಮಾನ ನೀಡುವ ವಿಚಾರವನ್ನು ಸರ್ಕಾರ ಯಾವುದೇ ಪರಿಸ್ಥಿತಿಯಲ್ಲೂ ಪರಿಶೀಲಿಸಬಹುದೆಂದು ಇಂದು ಲೋಕಸಭೆಯಲ್ಲಿ ಗೃಹ ಸಚಿವ ಉಮಾಶಂಕರ ದೀಕ್ಷಿತ್ ಖಂಡತುಂಡವಾಗಿ ತಿಳಿಸಿದರು.
ದಂಗೆಕೋರರ ಹಿಂಸಾಚಾರ ಈಚೆಗೆ ಹೆಚ್ಚುತ್ತಿದ್ದು, ಭದ್ರತಾ ಕಾರ್ಯಾಚರಣೆಗಳನ್ನೂ ಬಿರುಸುಗೊಳಿಸಲಾಗಿದೆಯೆಂದ ಅವರು, ಬಂಡಾಯಕೋರರ ಕದನಕೋರ ಧೋರಣೆಯನ್ನು ಇನ್ನು ಸಹಿಸಲಾಗದೆಂದರು.
ಜನರ ಅಪಹರಣ ನಡೆಯುತ್ತಿದೆ. ಅವರನ್ನು ದಂಗೆಕೋರರ ಗುಂಪಿಗೆ ಬಲತ್ಕಾರವಾಗಿ ಸೇರಿಸಿಕೊಳ್ಳಲಾಗುತ್ತಿದೆ. ಜನರ ಪ್ರಾಣ ಮತ್ತು ಆಸ್ತಿ ರಕ್ಷಿಸಲು ಸರ್ಕಾರ ಸಾಕಷ್ಟು ಕ್ರಮ ತೆಗೆದುಕೊಳ್ಳಬೇಕು ಎಂದರು.
ಎಂ.ಎಸ್. ಸುಬ್ಬಲಕ್ಷ್ಮಿಗೆ ಮ್ಯಾಗ್ಸೆಸೆ ಪ್ರಶಸ್ತಿ
ಮನಿಲಾ, ಆ. 1– ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತ ಮತ್ತು ಭಜನೆಗಳನ್ನು ಹಾಡಿ ಸಮಾಜ ಕಲ್ಯಾಣ ಕಾರ್ಯಗಳಿಗಾಗಿ ಹತ್ತು ಲಕ್ಷ ಅಮೆರಿಕನ್ ಡಾಲರ್‌ಗಳಿಗೂ ಹೆಚ್ಚು ನಿಧಿ ಕೂಡಿಸಿಕೊಟ್ಟಿರುವ ಭಾರತದ ಗಾನಕೋಗಿಲೆ ಎಂ.ಎಸ್. ಸುಬ್ಬಲಕ್ಷ್ಮಿ ಅವರಿಗೆ 1974ನೆಯ ಸಾಲಿನ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿದೆ.
ಸಮಾಜ ಸೇವೆಗಾಗಿ ನೀಡುವ ಈ ಪ್ರಶಸ್ತಿಯನ್ನು ಈ ಬಾರಿ ಕರ್ನಾಟಕ ಸಂಗೀತ ವಿದುಷಿ ಶ್ರೀಮತಿ ಸುಬ್ಬಲಕ್ಷ್ಮಿ ಅವರಿಗೆ ನೀಡಲು ಇಂದು ಇಲ್ಲಿ ಸಮಾವೇಶಗೊಂಡಿದ್ದ ಪ್ರಶಸ್ತಿಯ ಧರ್ಮದರ್ಶಿಗಳ ಮಂಡಲಿ ಸಭೆ ನಿರ್ಧರಿಸಿತು.
ಶ್ರೀಮತಿ ಸುಬ್ಬಲಕ್ಷ್ಮಿಯವರು ಈ ಪ್ರಶಸ್ತಿ ಪಡೆದಿರುವ ಭಾರತೀಯರದಲ್ಲಿ ನಾಲ್ಕನೆಯವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.