ADVERTISEMENT

50 ವರ್ಷಗಳ ಹಿಂದೆ: ಮಂಗಳವಾರ 1.8.1972

ಪ್ರಜಾವಾಣಿ ವಿಶೇಷ
Published 31 ಜುಲೈ 2022, 21:30 IST
Last Updated 31 ಜುಲೈ 2022, 21:30 IST
   

ಸೇನೆ ವಾಪಸು ಜತೆಗೇ ಕಾಶ್ಮೀರ ನಿಯಂತ್ರಣ ರೇಖೆ ನಿರ್ಧಾರ

ನವದೆಹಲಿ, ಜುಲೈ 31– ಸಿಮ್ಲಾ ಒಪ್ಪಂದದ ಪ್ರಕಾರ ಸೈನಿಕ ಪಡೆಗಳನ್ನು ಅಂತರ
ರಾಷ್ಟ್ರೀಯ ಗಡಿಗೆ ವಾಪಸು ಕರೆಸಿಕೊಳ್ಳುವುದಕ್ಕೆ ಕ್ರಮವನ್ನೂ ‘ಜಮ್ಮು ಮತ್ತು ಕಾಶ್ಮೀರದಲ್ಲಿ ನಿಯಂತ್ರಣ ರೇಖೆ ನಿರ್ದೇಶನವನ್ನೂ ಜೊತೆ ಜೊತೆಯಲ್ಲಿಯೇ’ ತೆಗೆದುಕೊಳ್ಳ ಬೇಕೆಂದು ವಿದೇಶಾಂಗ ಸಚಿವ ಸ್ವರಣ್ ಸಿಂಗ್ ಅವರು ಇಂದು ಸಂಸತ್ತಿನ ಉಭಯ ಸದನಗಳಿಗೂ ತಿಳಿಸಿದರು.

ಸುಭದ್ರ, ಶಾಂತಿ ಸ್ಥಾಪನೆ ತತ್ವಗಳನ್ನು ಪಾಕಿಸ್ತಾನ ಒಪ್ಪಿಕೊಂಡು ಜಮ್ಮು ಮತ್ತು ಕಾಶ್ಮೀರದಲ್ಲಿ ಜುಲೈ 17ರಂದು ಇದ್ದ ನಿಯಂತ್ರಣ ರೇಖೆಯನ್ನು ಗೌರವಿಸುವುದಕ್ಕೆ ಸಮ್ಮತ ನೀಡಿದ ನಂತರವೇ ಭಾರತವು ಅಂತರರಾಷ್ಟ್ರೀಯ ಗಡಿಗೆ ತನ್ನ ಪಡೆಗಳನ್ನು ವಾಪಸು ಕರೆಸಿಕೊಳ್ಳಲು ಒಪ್ಪಿಗೆ ನೀಡಿತೆಂದು ಸಚಿವರು ನುಡಿದರು.

ADVERTISEMENT

ಬೆಲೆ ಏರಿಕೆ ವಿರುದ್ಧ ಸಂಸತ್ ಕಳವಳ ‘ತೀವ್ರ ಬಿಕ್ಕಟ್ಟು’ ಸಾಧ್ಯತೆ ಬಗ್ಗೆ ಎಚ್ಚರಿಕೆ

ನವದೆಹಲಿ, ಜುಲೈ 31– ಅಗತ್ಯ ವಸ್ತುಗಳ ಬೆಲೆಗಳು ಸತತವಾಗಿ ಏರುತ್ತಿರುವುದರ ವಿರುದ್ಧ ಇಂದು ಸಂಸತ್ತಿನ ಉಭಯ ಸದನ ಗಳೂ ತೀವ್ರ ಆತಂಕ ವ್ಯಕ್ತಪಡಿಸಿದವಲ್ಲದೆ ಉದ್ಭವಿಸುತ್ತಿರುವ ‘ಆರ್ಥಿಕ ಬಿಕ್ಕಟ್ಟಿನ’ ಸೂಚಿ ಈ ಬೆಲೆ ಏರಿಕೆಯೆಂದು ನುಡಿದರು.

ಲೋಕಸಭೆಯಲ್ಲಿ ಈ ವಿಷಯ ಕುರಿತು ನಿಲುವಳಿ ಸೂಚನೆಗೆ ಅಧ್ಯಕ್ಷರು ಅವಕಾಶ ನೀಡದಿದ್ದಾಗ ಕುಪಿತರಾದ ವಿರೋಧಿ ಪಕ್ಷದ ಸದಸ್ಯರು (ಕಮ್ಯುನಿಸ್ಟ್‌ ಮತ್ತು ಕೆಲವು ಪಕ್ಷೇತರರನ್ನುಳಿದು) ಸಭಾತ್ಯಾಗ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.