ಇತರ ಪಕ್ಷಗಳ ಜತೆ ಮೈತ್ರಿ: ಸಾಧ್ಯತೆ ತಳ್ಳಿಹಾಕಲಾಗದು– ಎಸ್ಸೆನ್
ಗಾಂಧಿನಗರ, ಡಿ. 19– ತಮ್ಮ ಪಕ್ಷ ಹಾಗೂ ಇತರ ಪಕ್ಷಗಳ ನಡುವೆ ಮೈತ್ರಿ ಅಥವಾ ಚುನಾವಣಾ ಹೊಂದಾಣಿಕೆ ಮಾಡಿಕೊಳ್ಳುವುದನ್ನು ತಳ್ಳಿಹಾಕುವುದಕ್ಕೆ ಆಗುವು ದಿಲ್ಲವೆಂದು ವಿರೋಧಿ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪನವರು ಹೇಳಿದರು.
ಪಕ್ಷದ ಪೂರ್ಣಾಧಿವೇಶನದಲ್ಲಿ ಭಾಗವಹಿಸಲು ಬೆಂಗಳೂರಿನಿಂದ ಆಗಮಿಸಿದ ಶ್ರೀ ಎಸ್. ನಿಜಲಿಂಗಪ್ಪ ಅವರು ಪತ್ರಕರ್ತರ ಜತೆ ಮಾತನಾಡುತ್ತಿದ್ದಾಗ, ಕಾಂಗ್ರೆಸ್ ಪಕ್ಷದಲ್ಲಿ ಒಡಕು ಉಂಟಾಗಿರುವುದರಿಂದ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿಯೂ ‘ಒಂಟಿಯಾಗಿಯೇ’ ಹೋಗುವ ತತ್ವವನ್ನು ನೀವು ಇನ್ನೂ ಒತ್ತಿ ಹೇಳುತ್ತೀರಾ ಎಂದು ಪ್ರಶ್ನಿಸಲಾಯಿತು.
ಈ ವಿಷಯವನ್ನು ತಾವು ಇನ್ನೂ ತೀವ್ರವಾಗಿ ಆಲೋಚಿಸಬೇಕಾಗಿದೆ ಯೆಂದೂ, ಸಜೀವ ಸಂಸ್ಥೆ ಬಲಗೊಳ್ಳುವಂತೆ ಮಾಡಬೇಕಾಗಿದೆಯೆಂದೂ, ಅಧಿಕ ಸಂಖ್ಯೆಯಲ್ಲಿ ಜನರು ತಮ್ಮ ಜತೆ ಸೇರುವರೆಂದು ತಾವು ನಿರೀಕ್ಷಿಸುವುದಾ ಗಿಯೂ ಅವರು ತಿಳಿಸಿದರು.
ನಗೆಯೊಂದೇ ಪ್ರತಿಕ್ರಿಯೆ
ಬೆಂಗಳೂರು, ಡಿ. 19– ತಮ್ಮನ್ನು ಶ್ರೀ ನಿಜಲಿಂಗಪ್ಪ ಅವರು ಕಾಂಗ್ರೆಸ್ಸಿನಿಂದ ವಜಾ ಮಾಡಿರುವುದನ್ನು ವರದಿಗಾರರು ಪ್ರಸ್ತಾಪಿಸಿದಾಗ ಪ್ರಧಾನಿ ಕಾಂಗ್ರೆಸ್ಸಿನ ರಾಜ್ಯ ಅಡ್‌ಹಾಕ್ ಸಮಿತಿಯ ಸಂಚಾಲಕ ಶ್ರೀ ಡಿ. ದೇವರಾಜ ಅರಸ್ ಅವರು, ‘ಇದರ ಬಗ್ಗೆ ನಗುವುದೊಂದನ್ನು ಬಿಟ್ಟರೆ ಬೇರೆ ಯಾವ ಪ್ರತಿಕ್ರಿಯೆಯೂ ಇಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.