ADVERTISEMENT

ಭಾನುವಾರ, 28–12–1969

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2019, 20:30 IST
Last Updated 27 ಡಿಸೆಂಬರ್ 2019, 20:30 IST

ಸರ್ಕಾರಿ ಕ್ಷೇತ್ರದ ವಿಸ್ತರಣೆ ನಿರ್ಧಾರ: ಪ್ರಧಾನಿ ಘೋಷಣೆ

ಆಜಾದ್‌ನಗರ, ಡಿ. 27– ಕೈಗಾರಿಕಾ ರಂಗದಲ್ಲಿ ಸರ್ಕಾರಿ ಕ್ಷೇತ್ರವನ್ನು ವಿಸ್ತರಿಸಲು ಸರ್ಕಾರ ಉದ್ದೇಶಿಸಿದೆ ಎಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ಘೋಷಿಸಿದರು.

ಆದರೆ ಇದೇ ಸಮಯದಲ್ಲಿ ಖಾಸಗಿ ಕ್ಷೇತ್ರದ ಒಂದು ಭಾಗವಾದ ವೈಯಕ್ತಿಕ ಉದ್ಯಮದ ‘ಚಿಕ್ಕಕ್ಷೇತ್ರ’ವನ್ನು ಸರ್ಕಾರ ಕಡೆಗಣಿಸುವುದಿಲ್ಲ. ಅಭಿವೃದ್ಧಿ ಹೊಂದುತ್ತಿರುವ ದೊಡ್ಡ ಖಾಸಗಿ ಕ್ಷೇತ್ರಕ್ಕೆ ಈ ಮಾತು ಅನ್ವಯಿಸುವುದಿಲ್ಲ ಎಂದೂ ಅವರು ಹೇಳಿದರು.

ADVERTISEMENT

ವಿಷಯ ನಿಯಾಮಕ ಸಮಿತಿಯಲ್ಲಿ ಆರ್ಥಿಕ ನೀತಿ ನಿರ್ಣಯದ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಶ್ರೀಮತಿ ಗಾಂಧಿ ಅವರು ಮಧ್ಯೆ ಮಾತನಾಡುತ್ತಾ ಈ ವಿಷಯವನ್ನು ತಿಳಿಸಿದರು.

ಭೂ ಸುಧಾರಣೆ ಶಾಸನ ಪೂರ್ಣ ಕಾರ್ಯತಗಕ್ಕೆ ಕೊನೇ ಗಡುವು ನಿಗದಿ

ಆಜಾದ್‌ನಗರ, ಡಿ. 27– ರಾಜ್ಯ ಸರ್ಕಾರಗಳು ಅಂಗೀಕರಿಸಿದ ಎಲ್ಲ ಭೂಸುಧಾರಣಾ ಶಾಸನಗಳ ಪೂರ್ಣ ಕಾರ್ಯಗತಕ್ಕೆ 1970–71ರ ವರ್ಷವನ್ನು ಅಂತಿಮ ಅವಧಿಯನ್ನಾಗಿ ನಿಗದಿ ಮಾಡಲಾಗಿದೆ.

ಅಧಿಕಾರಾರೂಢ ಕಾಂಗ್ರೆಸ್ಸಿನ ಕಾರ್ಯಕಾರಿ ಸಮಿತಿಯು ಅಂತಿಮವಾಗಿ ಸಿದ್ಧಪಡಿಸಿದ ಆರ್ಥಿಕ ನೀತಿ ಕುರಿತ ನಿರ್ಣಯದಲ್ಲಿ ಈ ಕೊನೇ ಅವಧಿಯನ್ನು ನಿಗದಿ ಮಾಡಲಾಗಿದೆ.

ನಿನ್ನೆ ಹೊತ್ತು ಮೀರಿದ ರಾತ್ರಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಮೂರೂವರೆ ಗಂಟೆಗಳ ಕಾಲ ನಡೆಸಿದ ಸಭೆಯಲ್ಲಿ ಸುಧೀರ್ಘ ಚರ್ಚೆಗಳಾದ ನಂತರ ಮೂಲ ಕರಡು ನಿರ್ಣಯಕ್ಕೆ ಈ ಮಹತ್ವದ ವಿಷಯವನ್ನು ಸೇರಿಸಲಾಯಿತು.

ರಾಜ್ಯ ಹೈಕೋರ್ಟಿನ ಶ್ರೇಷ್ಠ ನ್ಯಾಯಮೂರ್ತಿ ಆಗಿ ಎಂ. ಸದಾಶಿವಯ್ಯ

ಬೆಂಗಳೂರು, ಡಿ. 27– ನ್ಯಾಯಮೂರ್ತಿ ಶ್ರೀ ಎಂ. ಸದಾಶಿವಯ್ಯ ಅವರನ್ನು ಮೈಸೂರು ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯನ್ನಾಗಿ ರಾಷ್ಟ್ರಪತಿಗಳು ನೇಮಿಸಿದ್ದಾರೆ.

ನಗರದಲ್ಲಿ ನಡೆಯುತ್ತಿರುವ ಅಖಿಲ ಭಾರತ ವಕೀಲರುಗಳ ಸಮ್ಮೇಳನದಲ್ಲಿ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ಶ್ರೀ. ಕೆ.ಎಸ್. ಹೆಗ್ಡೆ ಅವರು ಈ ಸಂತೋಷದ ಸುದ್ದಿಯನ್ನು ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.