ಮೊರಾರ್ಜಿ ಉಪವಾಸ ಅಂತ್ಯ; ಜೂನ್‌ನಲ್ಲಿ ಗುರಾತ್ ಚುನಾವಣೆ
ನವದೆಹಲಿ, ಏ. 13– ಗುಜರಾತ್ ವಿಧಾನಸಭೆಗೆ ಜೂನ್ 7ರಂದು ಅಥವಾ ಆ ಸುಮಾರಿಗೆ ಚುನಾವಣೆ ನಡೆಸುವುದಾಗಿ ಪ್ರಧಾನಿಯಿಂದ ಪತ್ರ ಬಂದ ನಂತರ ಇಂದು ಸಂಜೆ 5 ಗಂಟೆಗೆ ಸಂಸ್ಥಾ ಕಾಂಗ್ರೆಸ್ ನಾಯಕ ಮೊರಾರ್ಜಿ ದೇಸಾಯಿ ತಮ್ಮ ನಿರಶನ ಅಂತ್ಯಗೊಳಿಸಿದರು.
ಸರ್ವೋದಯ ನಾಯಕ ಜಯಪ್ರಕಾಶ ನಾರಾಯಣ್ ಅವರು ನೀಡಿದ ನಿಂಬೆಹಣ್ಣಿನ ಪಾನಕ ಕುಡಿದು 79 ವರ್ಷದ ಮೊರಾರ್ಜಿ ಅವರು, ವಿರೋಧ ಪಕ್ಷದ ಮತ್ತು ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ನಿರಶನ ಮುರಿದರು.
ಸಂಜೆ 4ರ ಸಮಯದಲ್ಲಿ ಅವರಿಗೆ ಪ್ರಧಾನಿಯ ಪತ್ರ ತಲುಪಿಸಲಾಯಿತು. ನಂತರ ‘ಮೊರಾರ್ಜಿ ಭಾಯಿ ಜಿಂದಾ ಬಾದ್’ ಘೋಷಣೆಗಳ ನಡುವೆ ಅವರು ಮೂಸಂಬಿ ಹಣ್ಣಿನ ರಸ್ವನ್ನು ಕುಡಿದರು.
ಚರಣ್‌ಸಿಂಗ್, ಪಿಲೂಮೋದಿ, ಪಿ.ಕೆ.ದೇವ್, ಸಮರ್‌ಗುಹಾ, ಬಿಜುಪಟ್ನಾಯಕ್, ತ್ರಿದಿಬ್ ಚೌಧುರಿ, ನಿರೇನ್ ಘೋಷ್, ಮನುಭಾಯಿ ಪಟೇಲ್, ರಾಜನಾರಾಯಣ್, ಎಸ್.ಎನ್.ಮಿಶ್ರಾ, ಅಶೋಕ ಮೆಹ್ತಾ, ಮೋಹನ್ ಧಾರಿಯಾ ನಂದಾ, ಚಂದ್ರಶೇಖರ್, ಅದ್ವಾನಿ, ಕಾಮರಾಜ್ ಮುಂತಾದವರು ಈ ಸಮಯದಲ್ಲಿ ಹಾಜರಿದ್ದು, ಹರ್ಷ ವ್ಯಕ್ತಪಡಿಸಿದರು.
ಜಲವಿವಾದ ಇತ್ಯರ್ಥಕ್ಕೆ ಕಾಲಮಿತಿ ಅಸಾಧ್ಯ
ನವದೆಹಲಿ, ಏ. 13– ಯಾವುದೇ ಅಂತರರಾಜ್ಯ ನದಿ ಜಲ ವಿವಾದವನ್ನು ಮಧ್ಯಸ್ಥಿಕೆಯಿಂದ ಇತ್ಯರ್ಥಪಡಿಸಲು 3 ವರ್ಷಗಳ ಕಾಲ ಮಿತಿ ಇರಬೇಕೆಂದೂ, ಅನಂತರ ಅದನ್ನು ನ್ಯಾಯಮಂಡಳಿಯೊಂದರಿಂದ ಕಡ್ಡಾಯ ಪಂಚಾಯ್ತಿಗಾಗಿ ಒಪ್ಪಿಸಬೇಕೆಂದೂ ಆಡಳಿತ ಸುಧಾರಣಾ ಆಯೋಗ ಮಾಡಿದ್ದ ಶಿಫಾರಸನ್ನು ಸರ್ಕಾರ ತಿರಸ್ಕರಿಸಿದೆ.
ಅಂತಹ ಯಾವುದೇ ಕಾಲಮಿತಿಯನ್ನು ನಿಗದಿ ಮಾಡುವುದು ‘ಕಾರ್ಯ ಸಾಧ್ಯವಾಗುವುದಿಲ್ಲ’ ಎಂಬ ಅಭಿಪ್ರಾಯವನ್ನು ಸರ್ಕಾರ ತಳೆದಿದೆ.
ಕೇಂದ್ರ– ರಾಜ್ಯ ಬಾಂಧವ್ಯ ಕುರಿತ ಆಡಳಿತ ಸುಧಾರಣಾ ಆಯೋಗದ ವರದಿಯಲ್ಲಿ ಈ ಶಿಫಾರಸನ್ನು ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.