ADVERTISEMENT

50 ವರ್ಷಗಳ ಹಿಂದೆ: ಕೊಳವೆ ಮೂಲಕ ಮಂಗಳೂರಿಗೆ ಕುದುರೆಮುಖದ ಕಬ್ಬಿಣ ಅದಿರು

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 19:06 IST
Last Updated 8 ಜೂನ್ 2025, 19:06 IST
 50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ಕೊಳವೆ ಮೂಲಕ ಮಂಗಳೂರಿಗೆ ಕುದುರೆಮುಖದ ಕಬ್ಬಿಣ ಅದಿರು

ಹೈದರಾಬಾದ್‌, ಜೂನ್‌ 8– ಪಶ್ಚಿಮಘಟ್ಟಗಳಲ್ಲಿರುವ ಕುದುರೆಮುಖದಿಂದ ಕಬ್ಬಿಣದ ಅದಿರನ್ನು ಮಂಗಳೂರು ಬಂದರಿಗೆ ಇನ್ನು ಮುಂದೆ ಕೊಳವೆಗಳ ಮೂಲಕ ಸಾಗಿಸಲಾಗುವುದು. ಈ ರೀತಿ ಕೊಳವೆಗಳಲ್ಲಿ ಅದಿರು ಸಾಗಣೆಯಾಗುವುದು ಭಾರತದಲ್ಲೇ ಪ್ರಪ್ರಥಮ ಎಂದು ರಾಷ್ಟ್ರೀಯ ಖನಿಜ ಅಭಿವೃದ್ಧಿ ಕಾರ್ಪೊರೇಷನ್‌ ಡೈರೆಕ್ಟರ್‌ ಆರ್‌.ಪಿ. ಕಪೂರ್ ತಿಳಿಸಿದ್ದಾರೆ.

ಈ ವಿಧಾನದಲ್ಲಿ ಶೇ 40ರಷ್ಟು ಕಬ್ಬಿಣ ಇರುವ ಅದಿರನ್ನು ಅರೆ ದ್ರಾವಣದ ರೂಪಕ್ಕೆ ಪರಿವರ್ತಿಸಿ ನೆಲದಿಂದ 900 ಮೀಟರ್ ಎತ್ತರದ ಘಟ್ಟಕ್ಕೆ ಪಂಪ್‌ ಮಾಡಿ, ಅಲ್ಲಿಂದ 120 ಕಿ.ಮೀ. ಉದ್ದದ ಕೊಳವೆಗಳಲ್ಲಿ ಮಂಗಳೂರು ಬಂದರಿಗೆ ಸಾಗಿಸಲಾಗುವುದು. ಅಲ್ಲಿ ಮತ್ತೆ ಅದನ್ನು ಹಡಗಿಗೆ ತುಂಬಲು ಸಾಧ್ಯವಾಗುವಂತೆ ಘನರೂಪಕ್ಕೆ ಪರಿವರ್ತಿಸಲಾಗುವುದು. ಇದು ಅತ್ಯಂತ ಆಧುನಿಕ ಹಾಗೂ ಹೆಚ್ಚು ವೆಚ್ಚ ಇಲ್ಲದ ಸುರಕ್ಷಿತ ವಿಧಾನ ಎಂದೂ ಅವರು ತಿಳಿಸಿದ್ದಾರೆ.

ADVERTISEMENT

ಹಸಿವು, ಬಡತನ ನಡುವೆ ಮಾರಕಾಸ್ತ್ರಗಳ ದಾಸ್ತಾನು

ಬೆಂಗಳೂರು, ಜೂನ್‌ 8– ಪ್ರಪಂಚದ ಒಂದು ಭಾಗದಲ್ಲಿ ಹಸಿವು– ಬಡತನಗಳಿಂದ ಜನರು ನರಳುತ್ತಿರುವಾಗ, ಇನ್ನೊಂದು ಭಾಗದಲ್ಲಿ ಮಾರಕ ಅಸ್ತ್ರಗಳ ದಾಸ್ತಾನಿಗಾಗಿ ಸಂಪತ್ತು ವಿನಿಯೋಗವಾಗುತ್ತಿರುವುದನ್ನು ರಾಜ್ಯಪಾಲ ಮೋಹನಲಾಲ್‌ ಸುಖಾಡಿಯಾ ಅವರು ಇಂದು ಇಲ್ಲಿ ಖಂಡಿಸಿದರು.

ಭಾರತದ ವಿಶ್ವ ಸಂಘ ಕೇಂದ್ರಗಳ ಪ್ರಥಮ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿದ ಅವರು, ‘ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವ ಕಲ್ಯಾಣಕ್ಕೆ ನೆರವಾಗಲಿ’ ಎಂದು ಆಶಿಸಿದರು.

ವಸುಧೈವ ಕುಟುಂಬ ನೀತಿಯನ್ನು ಅವರು ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.