ಗುಜಾರಾತ್: ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತವಿಲ್ಲ
ಅಹಮದಾಬಾದ್, ಜೂನ್ 13– ಗುಜರಾತ್ ವಿಧಾನ ಸಭೆಗೆ ನಡೆದ ಚುನಾವಣೆಗಳಲ್ಲಿ ಜನತಾರಂಗಕ್ಕಾಗಲಿ, ಕಾಂಗ್ರೆಸಿಗಾಗಲಿ ಸ್ಪಷ್ಟ ಬಹುಮತ ದೊರಕದಿರುವುದರಿಂದ ಅವುಗಳಲ್ಲಿ ಯಾವುದೊಂದೂ ಸ್ವತಃ ಸರಕಾರ ರಚಿಸಬಲ್ಲ ಸ್ಥಿತಿಯಲ್ಲಿಲ್ಲ.
182 ಜನ ಸದಸ್ಯಬಲದ ಹೊಸ ವಿಧಾನಸಭೆಗಾಗಿ 181 ಕ್ಷೇತ್ರಗಳಲ್ಲಿ ಮತದಾನ ನಡೆದು ಉನ್ನೂ ಒಂದು ಫಲಿತಾಂಶ ಮಾತ್ರ ಬರಬೇಕಾಗಿದ್ದು ಐದು ಪಕ್ಷಗಳ ಜನತಾರಂಗಕ್ಕೆ 87 ಸ್ಥಾನಗಳು ಲಭಿಸಿವೆ. ಕಾಂಗ್ರೆಸಿಗೆ 25 ಸ್ಥಾನ ದೊರಕಿದ್ದು ಅದು ಏಕೈಕ ದೊಡ್ಡ ಪಕ್ಷವಾಗಿ ನಿಂತಿದೆ.
ಮಾಜಿ ಮುಖ್ಯಮಂತ್ರಿ ಚಿಮನ್‌ಭಾಯಿ ಪಟೇಲರ ಕಿಸಾನ್ ಮಜ್ದೂರ್ ಲೋಕ ಪಕ್ಷಕ್ಕೆ ಕೇವಲ 12 ಸ್ಥಾನ ಸಿಕ್ಕಿ ಅದು ಮೂರನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಅದು 125 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು.
ಪಕ್ಷೇತರರು 6 ಜನ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಸಂಪುಟ ರಚಿಸಬಯಸಿದರೆ ಅದಕ್ಕೆ ಪಕ್ಷೇತರರು ಮತ್ತು ಕಿಸಾನ್ ಮಜ್ದೂರ್ ಲೋಕಪಕ್ಷದಿಂದ 16 ಜನ ಸದಸ್ಯರ ಬೆಂಬಲವಾದರೂ ಅಗತ್ಯ. ಆದರೆ ಜನತಾ ರಂಗಕ್ಕೆ ಇನ್ನೂ 5 ಜನರ ಬೆಂಬಲ ಮಾತ್ರ ಸಂಪಾದಿಸಿಕೊಂಡರೆ ಅದು ಸಂಪುಟ ರಚಿಸಬಹುದು.
ಸರ್ಕಾರದ ಆಜ್ಞೆ: ಶಿಕ್ಷಕರ ನಿವೃತ್ತ ವಯಸ್ಸು 58
ಬೆಂಗಳೂರು, ಜೂನ್ 13– ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕ ಮತ್ತು ಇತರ ಸಿಬ್ಬಂದಿ ನಿವೃತ್ತ ವಯಸ್ಸು 58 ವರ್ಷವೇ ಉಳಿದಿದೆ.
ಅವರ ನಿವೃತ್ತಿ ವಯಸ್ಸನ್ನು 58ರಿಂದ 55ಕ್ಕೆ ಇಳಿಸಿದ್ದ ಆಜ್ಞೆಯನ್ನು ಸರ್ಕಾರ ಅಮಾನತಿನಲ್ಲಿಟ್ಟಿದೆ.
ಕಳೆದ ಮೇನಲ್ಲಿ ಸರ್ಕಾರ ಐದು ವಿವಿಧ ಸರ್ಕಾರಿ ಆಜ್ಞೆಗಳ ಮೂಲಕ ಶಿಕ್ಷಕ ಮತ್ತು ಇತರ ಸಿಬ್ಬಂದಿ ನಿವೃತ್ತಿ ವಯಸ್ಸನ್ನು ಇದೇ ಜೂನ್ 1ರಿಂದ 55ಕ್ಕೆ ಇಳಿಸಿತು.
ಶಿಕ್ಷಕರು ಅದನ್ನು ತೀವ್ರವಾಗಿ ವಿರೋಧಿಸಿದರು.
ಸರ್ಕಾರ ಇಂದು ಇನ್ನೊಂದು ಆಜ್ಞೆ ಹೊರಡಿಸಿ ಆ ಆಜ್ಞೆಗಳನ್ನು ಪುನಃ ಆಜ್ಞೆ ಹೊರಡಿಸುವವರೆಗೆ ಈ ಕ್ಷಣದಿಂದಲೇ ಅಮಾನತಿನಲ್ಲಿಡಲಾಗಿದೆಯೆಂದು ಸಾರಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.