ADVERTISEMENT

50 ವರ್ಷಗಳ ಹಿಂದೆ ‌| ಆಡಳಿತ ಭಾಷೆ, ಶಿಕ್ಷಣ ಮಾಧ್ಯಮ ಆಗಲಿ ಕನ್ನಡ: ಆಗ್ರಹ

​ಪ್ರಜಾವಾಣಿ ವಾರ್ತೆ
Published 31 ಮೇ 2024, 23:37 IST
Last Updated 31 ಮೇ 2024, 23:37 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ಆಡಳಿತ ಭಾಷೆ, ಶಿಕ್ಷಣ ಮಾಧ್ಯಮ ಆಗಲಿ ಕನ್ನಡ: ಆಗ್ರಹ

ಚಿಕ್ಕದೇವರಾಜ ಮಂಟಪ (ಮಂಡ್ಯ), ಮೇ 31– ‘ಆದಷ್ಟು ಬೇಗ ಕನ್ನಡ ಆಡಳಿತ ಭಾಷೆಯಾಗಬೇಕು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡ ಶಿಕ್ಷಣ ಮಾಧ್ಯಮವಾಗಬೇಕು’

ಶ್ರೀಮತಿ ಜಯದೇವಿ ತಾಯಿ ಲಿಗಾಡೆ ಅವರು ಇಂದು ಇಲ್ಲಿ ಆರಂಭವಾದ 48ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಭಾಷಣದಲ್ಲಿ ಈ ಅಂಶವನ್ನು ಆಗ್ರಹಪೂರ್ವಕವಾಗಿ ಒತ್ತಾಯಪಡಿಸಿದರು.

ADVERTISEMENT

ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣ ಮಾಡಲು 17 ವರ್ಷಗಳ ಕಾಲ ಕಾಯಬೇಕಾಯಿತೆಂದು ಹೇಳಿದ ಅವರು, ಈಗ ಕನ್ನಡವನ್ನು ಆಡಳಿತ ಭಾಷೆಯಾಗಿ ಮಾಡಲು ಇನ್ನೂ ಹೆಚ್ಚು ಕಾಲ ಕಾಯಬೇಕೆಂದರೆ ಅದು ನಮ್ಮ ಸಹನೆಯನ್ನು ಒರೆಗೆ ಹಚ್ಚಿದಂತೆ ಆಗುವುದು ಎಂದು ಎಚ್ಚರಿಸಿದರು.

ಪ್ರಚೋದಕ ಶಕ್ತಿಯ ವಿಚಾರಸಾಹಿತ್ಯ ರಚನೆಗೆ ಅರಸು ಕರೆ

ಚಿಕ್ಕದೇವರಾಜ ಮಂಟಪ (ಮಂಡ್ಯ), ಮೇ 31– ‘ಜನರ ಬದುಕಿಗೆ ನೆರವಾಗುವಂತಹ, ಅವರ ಮಾನಸಿಕ ದಾಸ್ಯವನ್ನು ಹೋಗಲಾಡಿಸಿ, ಅವರಲ್ಲಿ ಆತ್ಮಗೌರವ ಮೂಡಿಸುವಂತಹ ಚೇತನಪೂರ್ಣ ಸಾಹಿತ್ಯವನ್ನು ಹೆಚ್ಚು ಹೆಚ್ಚಾಗಿ ಸೃಷ್ಟಿಸಬೇಕು’ ಎಂದು ಮುಖ್ಯಮಂತ್ರಿ ದೇವರಾಜ ಅರಸು ಅವರು ಇಂದು ಸಾಹಿತಿಗಳಿಗೆ ಕರೆ ನೀಡಿದರು.

ಇಲ್ಲಿ ಬೆಳಿಗ್ಗೆ 48ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಅವರು ‘ನಮಗೆ ಬೇಕಾಗಿರುವುದು ಪ್ರಚಾರ ಸಾಹಿತ್ಯವಲ್ಲ, ವಿಚಾರಸಾಹಿತ್ಯ. ರಾಷ್ಟ್ರದ ಪುನರ್ ನಿರ್ಮಾಣಕ್ಕೆ ಜನತೆಯನ್ನು ಸನ್ನದ್ಧಗೊಳಿಸುವ ಪ್ರಚೋದಕ ಸಾಹಿತ್ಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.